ರಾಯಚೂರು: ಲಿಂಗಸುಗೂರು ಪೊಲೀಸ್ ಠಾಣೆ ಆವರಣದಲ್ಲಿ ಉರ್ದು ಶಾಲಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕಿ ಹಾಗೂ ಮಕ್ಕಳ ಕಲಿಕೆ ಸಾರ್ವಜನಿಕರನ್ನು ಹುಬ್ಬೇರಿಸುವಂತೆ ಮಾಡಿದೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಶಿಕ್ಷಣ ಇಲಾಖೆ ಶಾಲೆಗಳಿಗೆ ರಜೆ ಘೋಷಿಸಿದೆ. ಅಲ್ಲದೆ ಮಕ್ಕಳು ಶಿಕ್ಷಣ ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ವಿದ್ಯಾಗಮ ಸೇರಿದಂತೆ ಕೆಲ ಯೋಜನೆ ಜಾರಿಗೆ ತರಲಾಗಿದೆ.
ತಾಲೂಕಿನಾದ್ಯಂತ ಮಸೀದಿ, ಮಂದಿರ, ಬಯಲು ಪ್ರದೇಶಗಳಲ್ಲಿ ಶೈಕ್ಷಣಿಕ ಕಿಟ್ ಬಳಸಿಕೊಂಡು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಅಂತರ ಕಾಯ್ದು, ಸ್ವಚ್ಛತೆ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಿ ಕಲಿಕಾ ಆಸಕ್ತಿ ವೃದ್ಧಿಸಲಾಗುತ್ತಿದೆ. ಆದರೆ ಇಲ್ಲಿನ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಪಾಠ ಮಾಡುತ್ತಿದ್ದು, ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿದ ಶಿಕ್ಷಕಿ ಗೀತಾಂಜಲಿ, ಶಿಕ್ಷಣ ಇಲಾಖೆ ನಿರ್ದೇಶನ ಆಧರಿಸಿ ವಾರ್ಡ್ ಮಟ್ಟದಲ್ಲಿ ಕಲಿಕೆ ಆರಂಭಿಸಿದ್ದೇವೆ. ಪಟ್ಟಣದಲ್ಲಿ ಬಯಲು ಪ್ರದೇಶ ಸಿಗದೆ ಹೋಗಿದ್ದರಿಂದ ಪೊಲೀಸ್ ಠಾಣೆ ಅವರಣ ಆಯ್ಕೆ ಮಾಡಿಕೊಂಡಿದ್ದು, ಮಕ್ಕಳು, ಪಾಲಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.