ರಾಯಚೂರು: ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದ ಅಭಿವೃದ್ಧಿ ನೆಪದಲ್ಲಿ ಒಂದು ತಿಂಗಳಿಂದ ಸಾರಿಗೆ ಸಂಸ್ಥೆ ಬಸ್ಗಳನ್ನು ಬಸ್ ನಿಲ್ದಾಣ ವೃತ್ತ, ರಾಜ್ಯ ಹೆದ್ದಾರಿಗಳಲ್ಲಿ ನಿಲುಗಡೆ ಮಾಡುತ್ತಿದ್ದು ಸಂಚಾರ ವ್ಯವಸ್ಥೆ ಹದಗೆಟ್ಟಿದೆ.
ಸಂಘ ಸಂಸ್ಥೆಗಳು, ಮಾಧ್ಯಮಗಳು ಸುಗಮ ಸಂಚಾರಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡಾ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಭಾರಿ ಟ್ರಾಫಿಕ್ ತೊಂದರೆಯಾಗಿ ತಾಸುಗಟ್ಟಲೆ ರಸ್ತೆ ದಾಟಲು ಕಾಯುವಂತಹ ದುಸ್ಥಿತಿಗೆ ತಲುಪಿದ್ದರೂ ಪೊಲೀಸ್ ಇಲಾಖೆ ಮಾತ್ರ ನೋಡಿಯೂ ನೋಡದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಎರಡು ರಾಜ್ಯ ಹೆದ್ದಾರಿ ಸಂಪರ್ಕಿಸುವ ಹಾಗೂ ನಿತ್ಯ ಸಾವಿರಾರು ಭಾರಿ ವಾಹನಗಳ ಸಂಚಾರಕ್ಕೆ ತೊಂದರೆ ಆಗದಿರಲೆಂದು ರಸ್ತೆ ಅಗಲೀಕರಣ, ಡಾಬಾ ಅಂಗಡಿ ತೆರವುಗೊಳಿಸಿದ್ದ ಪುರಸಭೆ ಮತ್ತು ತಾಲ್ಲೂಕು ಆಡಳಿತ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಬಹುತೇಕ ಸಂದರ್ಭಗಳಲ್ಲಿ ಪೊಲೀಸ್ ಕಾಯ್ದೆ, ಸಂಚಾರಿ ನಿಯಮ, ಸಾರ್ವಜನಿಕರಿಗೆ ತೊಂದರೆ ಎಂಬಿತ್ಯಾದಿ ನಿಯಮಗಳಡಿ ಲಕ್ಷಾಂತರ ದಂಡ ವಸೂಲಿ ಮಾಡುವ ಪೊಲೀಸ್ ಅಧಿಕಾರಿಗಳು, ಸಾರಿಗೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.
ಖಾಸಗಿ ವಾಹನಗಳಿಗೆ ಕಾಯ್ದೆ ಕಾನೂನು ಹೇಳುವ ಪೊಲೀಸ್ ಸಿಬ್ಬಂದಿ ಸಾರಿಗೆ ಸಂಸ್ಥೆಯ ಬಸ್ ನಿಲುಗಡೆಗೆ ಸಂಬಂಧಿಸಿದಂತೆ ಆಗುವ ತೊಂದರೆಗಳತ್ತ ಗಮನ ಹರಿಸುತ್ತಿಲ್ಲ. ತಾಲ್ಲೂಕು ಆಡಳಿತ ಸಾರ್ವಜನಿಕರ ಹಿತ, ಸುಗಮ ಸಂಚಾರಕ್ಕೆ ಆದ್ಯತೆ ನೀಡುವರೊ? ಅಥವಾ ಸಂಸ್ಥೆ ನಿಯಮಗಳ ಉಲ್ಲಂಘನೆಗೆ ಪ್ರೋತ್ಸಾಹಿಸುವರೊ? ಎಂಬ ಸಾರ್ವಜನಿಕರ ಚರ್ಚೆಗೆ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಉತ್ತರಿಸಬೇಕು ಎಂದು ಸಂಘ ಸಂಸ್ಥೆಗಳು ಆಗ್ರಹಪಡಿಸಿವೆ.