ರಾಯಚೂರು : ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಂಡು ಬರುತ್ತಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಪ್ರಚಾರಕ್ಕೆ ಇಳಿದಿದ್ದು, ಚುನಾವಣಾ ಕಣ ರಂಗೇರುತ್ತಿದೆ.
ಏಪ್ರಿಲ್ 17ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಅವರಿಗೆ ಚುನಾವಣಾ ವೆಚ್ಚಕ್ಕಾಗಿ ಗ್ರಾಮಗಳಲ್ಲಿ ಸಾರ್ವಜನಿಕರು ಸ್ವಯಂ ಹಣ ಸಂಗ್ರಹಿಸಿ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಈ ವಿಷಯವನ್ನು ತಳ್ಳಿ ಹಾಕಿದ್ದು, ಇದು ಅಕ್ಷರ ಸಹ ಸುಳ್ಳು.
ಅವರದೇ ಪಕ್ಷದ ಮುಖಂಡರು ಮುಂಚಿತವಾಗಿ ಹಣ ನೀಡಿ ಬರ್ತಾರೆ. ಬಳಿಕ ಅವರು ಪ್ರಚಾರಕ್ಕೆ ಹೋದಾಗ ಅದೇ ಹಣವನ್ನು ನೀಡಿ, ಸಾರ್ವಜನಿಕರು ದೇಣಿಗೆ ನೀಡಿದ್ದಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಓದಿ : ಬಿ ವೈ ವಿಜಯೇಂದ್ರ ಅಂದ್ರೆ ದುಡ್ಡು, ಹಣ ಕೊಟ್ಟು ವೋಟ್ ತಗೋತೀವಿ ಅನ್ನೋ ಅಹಂ.. ಸಿದ್ದರಾಮಯ್ಯ ಆರೋಪ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸರುವ ಬಸವನಗೌಡ ತುರುವಿಹಾಳ, ಇದು ಸುಳ್ಳು ಎಂದು ಹೇಳುವುದಾದರೆ ನಾನು ನಿಮ್ಮ ಮನೆ ದೇವರು, ಇಲ್ಲವೇ ಯಾವುದೇ ದೇವರ ಮೇಲೆ ಆಣೆ ಪ್ರಮಾಣ ಮಾಡುವುದಕ್ಕೆ ಸಿದ್ಧ ಎಂದು ಬಹಿರಂಗ ಸಮಾವೇಶದಲ್ಲಿ ಸವಾಲೆಸಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಸವಾಲನ್ನು ಸ್ವೀಕರಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್, ಎಲ್ಲಿ ಬರಬೇಕು ಅಲ್ಲಿ ಬಂದು ಉತ್ತರ ನೀಡುವೆ ಎಂದಿದ್ದಾರೆ.
ಈ ಸವಾಲು ಪ್ರತಿ ಸವಾಲಿನಿಂದ ಮಸ್ಕಿ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಈವರೆಗೆ ಬರೀ ಮಾತಿನ ಕೆಸರೆರಚಾಟವಿತ್ತು. ಇದೀಗ ಅದು ದೇವರ ಮುಂದೆ ಆಣೆ ಪ್ರಮಾಣ ಮಾಡುವಲ್ಲಿಗೆ ಬಂದು ತಲುಪಿದೆ.