ರಾಯಚೂರು: ಜಿಲ್ಲೆಯ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎನ್ನುವುದು ಬಹು ವರ್ಷದ ಬೇಡಿಕೆಯಾಗಿದ್ರೂ, ಸಮಯ ಕೂಡಿ ಬಂದಿರಲಿಲ್ಲ. ಇದೀಗ ವಿಮಾನ ನಿಲ್ದಾಣಕ್ಕೆ ಮೀಸಲು ಇರಿಸಿದ ಭೂಮಿ ಸರ್ವೇ ಕಾರ್ಯ ಭರದಿಂದ ಸಾಗಿದ್ದು, ವಿಮಾನ ನಿಲ್ದಾಣದ ಯೋಜನೆಯ ರೂಪುರೇಷೆ ಸಿದ್ಧತೆ ನಡೆಯುತ್ತಿದೆ.
ರಾಯಚೂರು ತಾಲೂಕಿನ ಯರಮರಸ್ ಗ್ರಾಮದ ಹೊರವಲಯದ ಬಳಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ನೂರಾರು ಎಕರೆಯನ್ನು ಹಲವು ವರ್ಷಗಳಿಂದ ಮೀಸಲು ಇರಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಮೀಸಲು ಇರಿಸಿದ ಜಾಗದಲ್ಲಿ ವಿಮಾನ ನಿಲ್ದಾಣ ಇಲ್ಲಿಯವರೆಗೆ ಸ್ಥಾಪನೆಯಾಗಿಲ್ಲ. ಇದೀಗ ಏರ್ಪೋರ್ಟ್ ನಿರ್ಮಿಸಬೇಕು ಎನ್ನುವುದರಿಂದ ಮೀಸಲು ಇರಿಸಿದ ಜಾಗದಲ್ಲಿ ಭೂಮಿಯ ಸರ್ವೇ ಕಾರ್ಯ ಭರದಿಂದ ಸಾಗಿದೆ.
1957ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ದಿ.ಜವಾಹರಲಾಲ್ ನೆಹರೂ ತಾಂತ್ರಿಕ ಕಾರಣದಿಂದಾಗಿ ಯರಮರಸ್ ಹೊರವಲಯದ ಜಾಗದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಹೀಗಾಗಿ ನೆಹರೂ ಅವರ ಸವಿ ನೆನಪಿಗೆ ಈ ಭಾಗಕ್ಕೆ ವಿಮಾನ ಸೌಲಭ್ಯ ಒದಗಿಸಲು ಇದೇ ಸ್ಥಳವನ್ನು ಕಾಯ್ದಿರಿಸಲಾಯಿತು. ಆಗ ಭೂ ಮಾಲೀಕರು ಸಹ ಭೂಮಿಯನ್ನು ಸಹ ನೀಡಿದ್ರು. ಆದ್ರೆ ವಿಮಾನ ನಿಲ್ದಾಣ ಸ್ಥಾಪನೆಯಾಗದೇ, ಹಾಗೇ ನನೆಗುದ್ದಿಗೆ ಬಿದ್ದಿತ್ತು. ಇದೀಗ ನಿಲ್ದಾಣಕ್ಕೆ ಮೀಸಲಿರಿಸಿದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಆರೋಪಗಳಿರುವ ಹಿನ್ನೆಲೆಯಲ್ಲಿ ಭೂಮಿಯ ಸರ್ವೇ ಕಾರ್ಯವನ್ನು ನಡೆಸಲಾಗುತ್ತಿದೆ.
ಇನ್ನು ಹಲವು ವರ್ಷಗಳ ಬೇಡಿಕೆಯಾಗಿರುವ ಏರ್ಪೋರ್ಟ್ ನಿರ್ಮಾಣಕ್ಕೆ ಪೂರಕವಾಗಿದೆ ಎನ್ನುವ ಕುರಿತಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡುವ ಮೂಲಕ ಯರಮರಸ್ ಹೊರವಲಯದ ಜಾಗ ಸೂಕ್ತ ಎಂದು ವರದಿಯನ್ನು ಸಹ ನೀಡಿದ್ದಾರೆ. ಹೀಗಾಗಿ ಸರ್ವೇ ಕಾರ್ಯದೊಂದಿಗೆ, ವಿಮಾನ ನಿಲ್ದಾಣದ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಸರ್ವೇ ಕಾರ್ಯ ಮುಗಿದ ಬಳಿಕ ಆಗಿರುವ ಒತ್ತುವರಿ ಕಂಡು ಬಂದ್ರೆ, ಅದನ್ನು ತೆರವುಗೊಳಿಸುವ ಮೂಲಕ ವಿಮಾನ ನಿಲ್ದಾಣ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.