ರಾಯಚೂರು: ಸ್ಪೀಕರ್ ಅಗಿದ್ದ ರಮೇಶ್ ಕುಮಾರ್ ಅವರ ಅದೇಶ ಪ್ರಶ್ನಿಸಿ ಅನರ್ಹಗೊಂಡಿರುವ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ಪೀಕರ್ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಶಾಸಕರು ಒಟ್ಟಿಗೆ ರಾಜೀನಾಮೆ ಕೊಡಲು ಇವರಿಗೇನು ಒಟ್ಟೊಟ್ಟಿಗೆ ಸಂಕಷ್ಟ ಬಂದಿತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ, ತಮಗೆ ತಿಳಿದಿರುವ ಕಾನೂನು ಪ್ರಕಾರ ರಮೇಶ್ ಕುಮಾರ್ ಆದೇಶವನ್ನು ಸುಪ್ರೀಂ ಎತ್ತಿಹಿಡಿಯಬಹುದು ಎಂದರು.
ಇನ್ನು, ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಆರೋಪಿಸಿದರು.
ರಾಯಚೂರು ಜಿಲ್ಲೆಯ ಶೀಲಹಳ್ಳಿ ಸೇತುವೆ ಈಗಾಗಲೇ ಒಡೆದು 50 ದಿನ ಕಳೆದು ಹೋಗಿದೆ. ಆದ್ರೆ ಇದುವರೆಗೆ ದುರಸ್ತಿಗೊಳಿಸಿಲ್ಲ. ಸರ್ಕಾರ ನೆರೆ ಪರಿಸ್ಥಿತಿ ನಿರ್ಲಕ್ಷಿಸುತ್ತಿರುವುದರಲ್ಲದೆ, ನೆರೆ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದೆ. ನೆರೆ ಹಾನಿ ಪ್ರದೇಶಕ್ಕೆ ಸಚಿವರು, ಅಧಿಕಾರಿಗಳು ಭೇಟಿ ನೀಡಿ ಸಮರ್ಪಕ ಪರಿಹಾರ ನೀಡುತ್ತಿಲ್ಲವೆಂದು ಸಂತ್ರಸ್ತರೇ ಹೇಳುತ್ತಿದ್ದಾರೆ. ನೆರೆಯಿಂದ ಗ್ರಾಮಗಳ ಸ್ಥಳಾಂತರವಾಗಬೇಕೆಂಬ ಬೇಡಿಕೆ ಸಹ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇನ್ನು, ಬಿಹಾರದ ನೆರೆಗೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಆದರೆ ಕರ್ನಾಟಕದ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.