ರಾಯಚೂರು: "ಫೆ. 21 ರಿಂದ 26ರ ವರೆಗೆ ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ನಡೆಯಲಿದೆ. ಈ ವೇಳೆ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಪ್ರಶಸ್ತಿ ನೀಡಲಾಗುವುದು. ಚಿತ್ರರಂಗದ ನಟ, ನಟಿಯರು, ನಿರ್ದೇಶಕರು ಭಾಗವಹಿಸಲಿದ್ದಾರೆ" ಎಂದು ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳು ತಿಳಿಸಿದರು.
ಶ್ರೀಮಠದಲ್ಲಿ ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಮೂಲ ಬೃಂದಾವನವನ್ನು ಸ್ವರ್ಣ ಕವಚದಿಂದ ಅಲಂಕರಿಸಲಾಗಿತ್ತು. ಪೂಜೆಯ ವೇಳೆ ರಾಯರ ಬಂಗಾರದ ಪಾದುಕೆಗಳಿಗೆ ಕನಕ, ವಜ್ರ, ವೈಢೂರ್ಯ, ನಾಣ್ಯ, ಪುಷ್ಪಗಳಿಂದಲೂ ಅಭಿಷೇಕ ನೆರವೇರಿತು.
ಮಠದ ಪ್ರಕಾರದಲ್ಲಿ ಸ್ವರ್ಣ ರಾಘವೇಂದ್ರ ಸ್ವಾಮಿಗಳ ಮೂರ್ತಿ ಹಾಗೂ ಪಾದುಕೆಗಳನ್ನು ಪ್ರತಿಷ್ಠಾಪಿಸಿ, ವಾದ್ಯಗಳೊಂದಿಗೆ ಚಿನ್ನದ ರಥೋತ್ಸವ ನಡೆಯಿತು. ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಶ್ರೀಮಠದ ಅಧಿಕಾರಿಗಳು, ಸಿಬ್ಬಂದಿ, ಗಣ್ಯರು, ವಿವಿಧೆಡೆಯಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು.
ಇದೇ ವೇಳೆ ವಿವಿಧ ವಿದ್ಯಮಾನಗಳ ಬಗೆಗೂ ಮಾತನಾಡಿದ ಶ್ರೀಗಳು, "ಜಿಲ್ಲೆಗೆ ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪನೆ ಬೇಡ. ಏಮ್ಸ್ ಆಸ್ಪತ್ರೆಯೇ ಸ್ಥಾಪನೆಯಾಗಬೇಕು ಎನ್ನುವುದು ನಮ್ಮ ಒತ್ತಾಸೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದೇನೆ" ಎಂದರು.
"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯದ ದಕ್ಷಿಣ ಭಾಗದ ಮಠಾಧೀಶರು, ಸಂತರೊಂದಿಗೆ ಈಗಾಗಲೇ ಮಂಥನ ಮಾಡಿದ್ದಾರೆ. ಈ ಭಾಗದಲ್ಲಿ ನಾವು ಮಾತನಾಡಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಮಂತ್ರಾಲಯ ಕ್ಷೇತ್ರದಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎನ್ನುವ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಎರಡ್ಮೂರು ಬಾರಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಸಿದ್ದತೆ ಕೈಗೊಳ್ಳಲಾಗುವುದು" ಎಂದರು.
"ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಇತರರಿಗೆ ಮಾದರಿಯಾಗುವಂತೆ ಅಧಿಕಾರಿಗಳು ವೈಯಕ್ತಿಕ ಜೀವನ ಹಾಗೂ ಸಾರ್ವಜನಿಕ ಬದುಕು ನಡೆಸಬೇಕು. ಕಚ್ಚಾಟ, ವೈಯಕ್ತಿಕ ನಿಂದನೆಗಿಳಿಯುವುದು ಸರಿಯಲ್ಲ. ರಾಜಕಾರಣಿಗಳು ಕೂಡಾ ವೈಯಕ್ತಿಕ ನಿಂದನೆಗಳನ್ನು ಬಿಟ್ಟು ಶಾಂತಿಯುವಾಗಿ ಚುನಾವಣೆ ಎದುರಿಸಬೇಕು" ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಇನ್ಮುಂದೆ ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಸಿಬ್ಬಂದಿಗೆ ಸಂಕಷ್ಟ: ಆಗ್ನೇಯ ವಿಭಾಗದಲ್ಲಿ ನೂತನ ವ್ಯವಸ್ಥೆ