ರಾಯಚೂರು: ಪುಸ್ತಕಗಳು ಇರುವ ಗ್ರಂಥಾಲಯವನ್ನ ನೋಡಿದ್ದೇವೆ. ಕಲ್ಲಿಗೆ ಸಂಬಂಧಿಸಿದ ಗ್ರಂಥಾಲಯವನ್ನು ಎಂದಾದರೂ ನೋಡಿದ್ದೀರಾ?. ಇದೇನು ಕಲ್ಲಿನ ಗ್ರಂಥಾಲವೇ ಎಂದು ಅಚ್ಚರಿ ಪಡಬೇಡಿ. ಚಿನ್ನದ ಗಣಿ ಖ್ಯಾತಿಯ ಹಟ್ಟಿಯಲ್ಲಿ ದೇಶದ ಏಕೈಕ ಸ್ಟೋನ್ ಲೈಬ್ರರಿ ಇದ್ದು, ಇಲ್ಲಿರುವ ಶಿಲೆಗಳು ಇತಿಹಾಸವನ್ನು ಸಾರುತ್ತಿವೆ.
ದೇಶದಲ್ಲಿರುವ ಏಕೈಕ ಚಿನ್ನದ ಗಣಿ ಅಂದ್ರೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿ. ಚಿನ್ನದ ಗಣಿಯಲ್ಲಿ ಕಲ್ಲಿನ ಸಂಶೋಧನೆ ಮಾಡುವ ಸಂಶೋಧಕರಿಗೆ ಇದು ವರದಾನವಾಗಿದೆ. ಯಾಕಂದ್ರೆ ಚಿನ್ನದ ಗಣಿ ಕಚೇರಿ ಹಿಂಭಾಗದ ಅರ್ಧ ಎಕರೆ ಪ್ರದೇಶದಲ್ಲಿ ಕಲ್ಲಿನ ಕೋರ್ ಲೈಬ್ರರಿ ಸ್ಥಾಪಿಸಲಾಗಿದೆ. ಈ ಗ್ರಂಥಾಲಯದಲ್ಲಿ ಅದಿರು ಸಂಶೋಧನೆ ಮಾಡಿರುವ ಕಲ್ಲುಗಳ ತುಣುಕುಗಳನ್ನ ಸಂಗ್ರಹಿಸಿಡಲಾಗಿದೆ.
ಹಟ್ಟಿ ಚಿನ್ನದ ಗಣಿ ಕಂಪನಿಯ ಮಲ್ಲಪ್ಪ ಶಾಫ್ಟ್, ಸೆಂಟ್ರಲ್ ಹಾಗೂ ವಿಲ್ಹೇಜ್ ಶಾಫ್ಟ್ ಗಣಿ ಕಂಪನಿ ವ್ಯಾಪ್ತಿಯ ದೇವದುರ್ಗ ತಾಲೂಕಿನ ಊಟಿ, ಸಿರವಾರ ತಾಲೂಕಿನ ಹಿರಾ-ಬುದ್ದಿನ್ನಿ, ಲಿಂಗಸೂಗೂರು ತಾಲೂಕಿನ ವಂದಲಿ ಹೊಸೂರು, ಚಿತ್ರದುರ್ಗ ಜಿಲ್ಲೆಯ ಇಂಗಳದಾಳ, ಅಜ್ಜನಗಳ್ಳಿ, ಕೆ.ಜಿ.ಎಫ್ ಸೇರಿದಂತೆ ಎಲ್ಲೆಲ್ಲಿ ಅದಿರು ಸಂಶೋಧನೆ ಮಾಡಲಾಗಿದೆಯೋ ಆಯಾ ಸ್ಥಳದಿಂದ ಡ್ರಿಲ್ಲಿಂಗ್ ಮಾಡಿದ ಕಲ್ಲಿನ ಮಾದರಿಗಳು, ಸ್ಥಳ-ವರ್ಷಾನುಸಾರ ಸಂಗ್ರಹಿಸಿ ಇಲ್ಲಿ ಇರಿಸಲಾಗಿದೆ.
1,900ಕ್ಕೂ ಮುಂಚೆ ಸಮೀಪದ ವಂದಲಿ ಹೊಸೂರು ಗಣಿಗಾರಿಕೆ ಅದಿರು ಸೇರಿ ತೆರೆದ ಗಣಿಗಾರಿಕೆಯಿಂದ 3 ಸಾವಿರ ಅಡಿ ಆಳದವರೆಗೆ ನಡೆಸುತ್ತಿದ್ದ ಕಂಪನಿ ಗಣಿಗಾರಿಕೆಯ ಕಲ್ಲಿನ ಮಾದರಿಯ ದಾಸ್ತಾನು ಇರುವುದರಿಂದ, ಖನಿಜ ನಿಕ್ಷೇಪಗಳ ವ್ಯವಸ್ಥಿತ ಪರಿಶೋಧನೆ, ಖನಿಜಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಕಲ್ಲು ಆಧಾರಿತ ಯುರೇನಿಯಂ, ಟಂಗಸ್ಟನ್, ಚಿನ್ನ, ತಾಮ್ರ, ಸೇರಿದಂತೆ ಖನಿಜ ಆಧಾರಿತ ಚಟುವಟಿಕೆಗಳ ಹಾಗೂ ಕೈಗಾರಿಕಗಳ ಸ್ಥಾಪನೆಗೆ ಈ ಲೈಬ್ರರಿ ಒಂದು ರೀತಿಯಲ್ಲಿ ಸಹಾಯಕವಾಗುತ್ತಿದೆ.
ಇಲಾಖಾವಾರು ಸಂಶೋಧನೆ-ಉತ್ಪಾದನೆಗೆ ಮಾತ್ರವಲ್ಲದೆ, ಪ್ರವಾಸಿಗಾರಿಗೆ ಗಣಿಗಾರಿಕೆ ಕುರಿತು ಗ್ರಂಥ ರಚನಾಕಾರರಿಗೆ ಪ್ರಯೋಜನವಾಗಲಿದೆ. ಕಲ್ಲಿನ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇದು ಅನುಕೂಲಕಾರವಾಗಿದೆ. ಹಾಗೆ ಬರುವ ಪೀಳಿಗೆಗೆ, ಗಣಿಗಾರಿಕೆಗೆ ವಿಸ್ತರಣೆ, ಸ್ಥಾಪನೆ, ಮರುಉತ್ಪಾದನೆ ಹೀಗೆ ನಾನಾ ರೀತಿಯಲ್ಲಿ ಇದೊಂದು ವರದಾನವಾಗಲಿದೆ.