ರಾಯಚೂರು: ನಗರದ ಉಪ್ಪರವಾಡಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 49ನೇ ವರ್ಷದ ನವರಾತ್ರಿ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ದೇವಸ್ಥಾನದ ಅರ್ಚಕ ಕಾಂತಾರ್ಚಾಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನ ಸಮಿತಿಯಿಂದ ಇಲ್ಲಿಯವರೆಗೂ ಅದ್ದೂರಿಯಾಗಿ ನವರಾತ್ರಿ ಉತ್ಸವ ಆಚರಿಸಿಕೊಂಡು ಬರಲಾಗಿತ್ತು. ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಅ.17ರಿಂದ 25ರವರೆಗೆ ನಿತ್ಯ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೇರವೆರಿಸಲಾಗುವುದು. ಬೆಳಗ್ಗೆ ಸುಪ್ರಭಾತ, ಪಚಾಂಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ನಾನಾ ವಿವಿಧ ಸೇವೆಗಳು ನಡೆಯಲಿವೆ ಎಂದರು.
ಒಂಬತ್ತು ದಿನಗಳಲ್ಲಿ ಪ್ರತಿ ದಿನ ವಾಹನ ಸೇವೆ ನಡೆಯಲಿದ್ದು, ಸೂರ್ಯವಾಹನ, ಸಿಂಹವಾಹನ, ಕಾಮದೇನು ಕಲ್ಪವೃಕ್ಷ ವಾಹನ, ಗರುಡ ವಾಹನ, ಚಂದ್ರ ವಾಹನ, ಆದಿಶೇಷ ವಾಹನ, ಗಜವಾಹನ, ಅಶ್ವವಾಹನ, ಆಂಜನೇಯ ವಾಹನ, ಕಾಲ್ಯಾಣೋತ್ಸವ, ಚಕ್ರತೀರ್ಥ ಸ್ಥಾನ ಸೇವೆಗಳೂ ಜರುಗಲಿವೆ. ಭಕ್ತಾದಿಗಳು ತಮ್ಮ ತನು ಮನು ಧನ ಸೇವೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.