ರಾಯಚೂರು: ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಿಜೆಪಿ ಕಾರ್ಯಕರ್ತರ ಜೊತೆ ನಡೆದ ಆನ್ ಲೈನ್ ಸಮಾವೇಶದಲ್ಲಿ ಹಗುರವಾಗಿ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇಂದು ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್ನ ಭರವಸೆಗಳು ಈಡೇರಿಸಲು ಆಗಲ್ಲ ಎಂದು ಹತಾಶೆಗೊಂಡು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಅವಧಿಯಲ್ಲಿ ನಾವು ನೀಡಿದ 163 ಭರವಸೆ ಪೈಕಿ 158 ಭರವಸೆಗಳು ಈಡೇರಿಸಿದ್ದೇವೆ. ಪ್ರಧಾನಿಯವರು ಮತ್ತು ಅವರ ಪಕ್ಷದ ನಾಯಕರು ನೀಡಿದ ಎಷ್ಟು ಭರವಸೆ ಈಡೇರಿಸಿದ್ದಾರೆ ಎಂಬುವುದನ್ನು ಮೊದಲು ನೋಡಿ. ಪ್ರಧಾನಿಯವರಿಗೆ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಯರೇ ನೀವೂ 2014ರಲ್ಲಿ ನೀಡಿದ ಭರವಸೆಗಳು ಎಷ್ಟು ಈಡೇರಿಸಿದ್ದಿರಾ?. ಯುವಕರಿಗೆ 2 ಕೋಟಿ ಉದ್ಯೋಗ ಭರವಸೆ ಈಡೇರಿಸಿದ್ದಾರಾ? ಮೋದಿಯವರು ದೊಡ್ಡ ದೊಡ್ಡ ಭರವಸೆ ಕೊಟ್ಟು ಈಡೇರಿಸಿಲ್ಲ. ಈಗ ನುಡಿದಂತೆ ನಡೆದವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೋದಿಯವರು ಯಾವತ್ತೂ ರೈತರ ಸಾಲಮನ್ನಾ ಮಾಡಿಲ್ಲ- ಸಿದ್ದರಾಮಯ್ಯ : ನರೇಂದ್ರ ಮೋದಿ ಸರ್ಕಾರ 9 ವರ್ಷದಲ್ಲಿ 152 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ನಾನು ಲೆಕ್ಕಾಚಾರ ಹಾಕಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡುತ್ತಿರುವುದು. ಬೆಲೆ ಏರಿಕೆ ಆಗಿದ್ದರಿಂದ ಜೀವನ ಸುಧಾರಣೆಗಾಗಿ 2 ಸಾವಿರ ರೂ. ಕೊಡುತ್ತಿರುವುದು, 414 ರೂ. ಸಿಲಿಂಡರ್ ಇತ್ತು, ಈಗ 1050ರೂ. ಆಗಿದೆ, ಬಿಜೆಪಿ ಸರ್ಕಾರ ಬಡವರ ತಲೆಮೇಲೆ ಬಾರ ಹಾಕಿದೆ. ಜಿಎಸ್ಟಿ ಶೇ 5 ರಷ್ಟು ಇದ್ದದ್ದು ಶೇ 18 ರಷ್ಟಕ್ಕೆ ಹೆಚ್ಚಿಸಿದ್ದಾರೆ. ಎಲ್ಲದರ ದರ ಮೂರುಪಟ್ಟು ಹೆಚ್ಚಳವಾಗಿದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು. ರೈತರ ಸಾಲ 1ಲಕ್ಷದವರಿಗೆ ಮನ್ನಾಮಾಡುವುದಾಗಿ ಹೇಳಿದ್ದರು, ಸಾಲಮನ್ನಾ ಮಾಡಿದ್ರಾ?. ಮೋದಿಯವರು ಯಾವತ್ತೂ ರೈತರ ಸಾಲಮನ್ನಾ ಮಾಡಿಲ್ಲ ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕರ್ತರಿಗೆ ಸುಳ್ಳು ಹೇಳಿ ಪ್ರಚಾರ ಮಾಡಲು ತಿಳಿಸಿದ್ದಾರೆ. ಅಭಿವೃದ್ಧಿ ಕೆಲಸವನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾ ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ನಾವು ಕೊಟ್ಟ ಭರವಸೆಗಳು ಜಾರಿ ಮಾಡೇ ಮಾಡುತ್ತೇವೆ. ಪ್ರಧಾನಿ ಮೋದಿಯ ಸುಳ್ಳಿಗೆ ತಕ್ಕ ಉತ್ತರ ನಾವು ಕೊಟ್ಟೆ ಕೊಡುತ್ತೇವೆ ಎಂದು ತಿರುಗೇಟು ನೀಡಿದರು.
ಯಾವನೋ ತೇಜಸ್ವಿ ಸೂರ್ಯ ಅಂತ ಇದ್ದಾನೆ. ತೇಜಸ್ವಿ ಸೂರ್ಯಗೆ ನಾನು ಅಮಾವಾಸ್ಯೆ ಅಂತ ಕರೆಯುತ್ತೇನೆ. ಏಕೆಂದರೆ ರೈತರ ಸಾಲಮನ್ನಾ ಮಾಡಿದರೆ, ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳುತ್ತಾನೆ. ಆಗ ನೀವೂ ಸುಮ್ಮನೆ ಇದ್ರೀ ಮೋದಿಯವರೇ. ಉದ್ಯಮಿಗಳಾಗಿರುವ ಅಂಬಾನಿ, ಅದಾನಿ, ವಿಜಯ ಮಲ್ಯ, ನೀರವ ಮೋದಿ ಇವರ ಸಾಲಮನ್ನಾ ಮಾಡಿದ್ರೆ ದೇಶ ಹಾಳಾಗಲ್ವಾ?. ರೈತರ ಸಾಲಮನ್ನಾ ಮಾಡಿದ್ರೆ ದೇಶ ಹಾಳಾಗುತ್ತಾ? ಎಂದು ಪ್ರಶ್ನಿಸಿದವರು.
ರಾಜ್ಯ ಸರ್ಕಾರದ ಬಗ್ಗೆ ಜನರು ಬೀದಿ - ಬೀದಿಯಲ್ಲಿ ಮಾತನಾಡುತ್ತಾರೆ. ಹುದ್ದೆಗಳ ನೇಮಕಾತಿಯಲ್ಲಿ ಲಂಚ, ಕಾಮಗಾರಿಯಲ್ಲಿ ಲಂಚ. ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದು ಒಂದೂವರೆ ವರ್ಷವಾಯ್ತು ಏನು ಕ್ರಮಕೈಗೊಂಡಿದ್ದಿರಾ?, ಸಿಎಂ ಬೊಮ್ಮಾಯಿ ದಾಖಲೆಗಳು ಕೊಡಿ ಅಂತಾರೆ. ಪಿಎಸ್ಐ ನೇಮಕಾತಿ ಅವ್ಯವಹಾರ ಮಾಡಿ ಅಧಿಕಾರಿಗಳು ಜೈಲಿನಲ್ಲಿ ಇದ್ದಾರೆ. ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ಈಶ್ವರಪ್ಪ ರಾಜೀನಾಮೆ ಕೊಟ್ಟ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಲಂಚ ಸ್ವೀಕಾರ ಮಾಡುವಾಗ ಸಿಕ್ಕಿಬಿದ್ದ. ಇಷ್ಟು ದಾಖಲೆಗಳು ಸಾಕಾಗಲ್ವ ಸಿಎಂ ಬೊಮ್ಮಾಯಿ ಎಂದರು.
ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಹುಮತವನ್ನು ಪಡೆಯುತ್ತದೆ: ನನ್ನ ಕಾಲದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡಿದ್ದೇನೆ. ಒಂದು ವೇಳೆ ಭಷ್ಟಚಾರ ನಡೆದಿದ್ದರೆ ತನಿಖೆ ಮಾಡಿಸಿ ಎಂದು ಸಾವಲು ಹಾಕಿದರು. ಸಿದ್ದರಾಮನಹುಂಡಿಯಲ್ಲಿ ಗಲಾಟೆ ವಿಚಾರವಾಗಿ ಮಾತನಾಡಿ, ಯಾರೇ ಗಲಾಟೆ ಮಾಡಿದರು ಅದನ್ನು ನಾನು ಖಂಡಿಸುತ್ತೇನೆ. ಬಿಜೆಪಿಯವರು ಮೆರವಣಿಗೆ ಮಾಡಿಕೊಂಡು ತೆರಳಿದರೆ ಏನು ಆಗುತ್ತಿರಲಿಲ್ಲ. ಯಾರೋ ನಮ್ಮ ಹುಡುಗರು ನನ್ನ ಪರವಾಗಿ ಘೋಷಣೆ ಕೂಗಿದ್ರು. ಸುಮ್ಮನೆ ಹೋಗಬೇಕಾಗಿತ್ತು. ಇಳಿದು ಬಂದು ಅವರ ಜೊತೆಗೆ ಗಲಾಟೆ ಮಾಡಿದರೆ ಎಂದು ತಿಳಿಸಿದರು. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬರಲ್ಲ. ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಹುಮತವನ್ನು ಪಡೆಯುತ್ತದೆ. ಜನರು ಸಮ್ಮಿಶ್ರ ಸರ್ಕಾರ ಮತ್ತು ಹಿಂಬಾಗಿಲಿನಿಂದ ಬಂದು ಸರ್ಕಾರ ರಚಿಸಿರುವುದನ್ನು ನೋಡಿ ಬೇಸತ್ತು ಹೋಗಿದ್ದಾರೆ ಎಂದರು.
ಇದನ್ನೂ ಓದಿ:ಗೀತಾ ಕಾಂಗ್ರೆಸ್ ಸೇರ್ಪಡೆ: ಶಿವರಾಜ್ಕುಮಾರ್ ಕೂಡ ಪ್ರಚಾರಕ್ಕೆ ಬರುತ್ತಾರೆ - ಗೀತಾ ಶಿವರಾಜ್ಕುಮಾರ್