ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸವನಗೌಡ ತುರುವಿಹಾಳ ಪರ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದ್ರು. ಪಟ್ಟಣದ ಮಸ್ಕಿಯ ಪೊಲೀಸ್ ಠಾಣೆ ಪಕ್ಕದಲ್ಲಿನ ಮೈದಾನದಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರಚಾರ ಸಭೆ ಆಯೋಜಿಸಲಾಗಿತ್ತು.
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ನನ್ನ ಅಧಿಕಾರಾವಧಿಯಲ್ಲಿ ಸುಮಾರು 5 ಸಾವಿರ ಕೋಟಿ ರೂ ಅನುದಾನ ಕೊಟ್ಟಿದ್ದೇನೆ. ಆದರೂ ಶಾಸಕರೆಲ್ಲಾ ಬಿಜೆಪಿಗೆ ಜಂಪ್ ಆಗಿದ್ದಾರೆ. 17 ಜನ ಶಾಸಕರನ್ನು 600-700 ಕೋಟಿ ರೂ ಕೊಟ್ಟು ಯಡಿಯೂರಪ್ಪ ಖರೀದಿ ಮಾಡಿದ್ದಾರೆ. ಅವರಲ್ಲಿ ಪ್ರತಾಪ್ಗೌಡ ಪಾಟೀಲ್ ಸಹ ಒಬ್ಬ. ಇನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಮಗ ವಿಜಯೇಂದ್ರ ಗೋಣಿ ಚೀಲದಲ್ಲಿ ದುಡ್ಡು ತಂದಿದ್ದಾನೆ. 40- 50 ಕೋಟಿ ಖರ್ಚು ಮಾಡಿ ಮಸ್ಕಿ ವಿಧಾನಸಭಾ ಚುನಾವಣೆ ಗೆಲ್ಲಬೇಕೆಂಬುದು ಅವನ ಉದ್ದೇಶ ಎಂದ್ರು.
2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 100ಕ್ಕೆ ನೂರು ಗೆದ್ದು ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಡಿಯೂರಪ್ಪ ಅವರ ಮಗ ಎಷ್ಟೇ ಕೋಟಿ ಖರ್ಚು ಮಾಡಿದ್ರು ಬಿಜೆಪಿ ಗೆಲ್ಲಲ್ಲ. ಮಸ್ಕಿ ಉಪಚುನಾವಣೆಯಲ್ಲಿ ನಾವು ಗೆಲುವು ಸಾಧಿಸುವ ಮೂಲಕ ಮುಂದಿನ ಚುನಾವಣೆಗೆ ನಾಂದಿ ಆಗಬೇಕು. 5ಎ ಕಾಲುವೆಗಾಗಿ ರೈತರು ಹೋರಾಟ ನಡೆಸಿದ್ದಾರೆ. ಒಂದು ಕಡೆ ಕೃಷ್ಣ ಮತ್ತು ತುಂಗಭದ್ರಾ ನದಿ ಇದೆ. ಪ್ರತಾಪ್ ಗೌಡ ಪಾಟೀಲ್ಗೆ 5ಎ ಕಾಲುವೆ ಬಗ್ಗೆ ಕೇಳಿದ್ರೆ ನಾನು ಮಾಡಿಕೊಡುತ್ತಿದ್ದೆ. ಯಡಿಯೂರಪ್ಪ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಲ್ಲ, ಅಪ್ಪ- ಮಗ ಲೂಟಿ ಹೊಡೆಯುವುದು ಬಿಟ್ಟರೆ ಬೇರೆ ಏನು ಮಾಡಿಲ್ಲ. ಕೊರೊನಾ ಬಂತು ದುಡ್ಡಿಲ್ಲ, ಕೊರೊನಾ ಬಂತು ದುಡ್ಡಿಲ್ಲವೆಂದು ಹೇಳ್ತಾರೆ ಅಂತಾ ವ್ಯಂಗ್ಯವಾಡಿದ್ರು.
ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು. 7 ಕೆ.ಜಿ ಅಕ್ಕಿ ಕೊಡಲು ಯಡಿಯೂರಪ್ಪಗೆ ಹೊಟ್ಟೆ ಉರಿ ಬಂದಿದೆ. ದಲಿತರ ಮನೆಗೆ ಯಡಿಯೂರಪ್ಪ ಭೇಟಿ ವಿಚಾರ ಪ್ರಸ್ತಾಪಿಸಿದ ದಲಿತರಿಗಾಗಿ ನಾನು ಹಲವು ಕಾನೂನುಗಳು ಮಾಡಿದ್ದೇನೆ. ದಲಿತರ ಮನೆಗೆ ಹೋಗಿ ಉಪ್ಪಿಟ್ಟು ತಿಂದು ಗಿಮಿಕ್ ಮಾಡುತ್ತೀರಾ? ಎಂದು ಲೇವಡಿ ಮಾಡಿದ್ರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತನಾಡಿ, ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿಯಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಬಂದ್ರೆ ನಿರುದ್ಯೋಗಿಗಳಿಗೆ 6 ಸಾವಿರ ನೀಡುತ್ತೇವೆ. ಪ್ರತಾಪ್ ಗೌಡ ಪಾಟೀಲ್ ನಿಮ್ಮ ಮತವನ್ನು, ನಿಮ್ಮ ಸ್ವಾಭಿಮಾನವನ್ನು 50ಕೋಟಿ ರೂ.ಗೆ ಮಾರಾಟ ಮಾಡಿದ್ದಾನೆ. ಅವನ ದುಡ್ಡನ್ನು ಖಾಲಿ ಮಾಡಿಸಬೇಕು. ಹೀಗಾಗಿ 'ಬಿಜೆಪಿಯವರ ನೋಟು ಬಸನಗೌಡನಿಗೆ ಓಟು ನೀಡಿ' ಎಂದು ಕರೆ ನೀಡಿದರು.