ರಾಯಚೂರು: ಇತ್ತೀಚಿಗೆ ಸನಾತನ ಹಿಂದೂ ಧರ್ಮದ ಬಗ್ಗೆ ಆಕ್ಷೇಪಣೆಗಳು ಮತ್ತು ಇಲ್ಲಸಲ್ಲದ ದೂಷಣೆಗಳನ್ನು ಮಾಡುವ ಮೂಲಕ ಆ ಸಮಾಜವನ್ನು ಛಿದ್ರ ಮಾಡಿ ಅದರ ವಿಶಿಷ್ಟತೆ ಹಾಳು ಮಾಡುವುದಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಕಳವಳ ವ್ಯಕ್ತಪಡಿಸಿದರು.
ಮಂತ್ರಾಲಯದ ರಾಯರ ಮಠದ ಯೋಗೀಂದ್ರ ಸಭಾ ಮಂಟಪದಲ್ಲಿ 11ನೇ ಚಾರ್ತುಮಾಸ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಸಮಸ್ತ ಹಿಂದೂ ಸಮಾಜ ಸಂಘಟಿತವಾಗಿ ಸೂಕ್ತವಾದ ಉತ್ತರವನ್ನು ನೀಡಬೇಕು ಎಂದರು.
ಅಂತವರು ಸನಾತದ ಧರ್ಮದ ಬಗ್ಗೆ ಹೇಳುವ ತಪ್ಪುಗಳನ್ನ ಸರಿಪಡಿಸುವುದರೊಂದಿಗೆ ಧರ್ಮವನ್ನು ಸುಭದ್ರಪಡಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಹಿಂದೂ ಧರ್ಮದ ಸಿದ್ಧಾಂತವನ್ನು ಎಲ್ಲರಿಗೂ ತಿಳಿಸುವುದು ಅನಿವಾರ್ಯ ಮತ್ತು ಅವಶ್ಯಕತೆ ಇದೆ. ವಿಶ್ವಾದ್ಯಂತ ಅಶಾಂತಿ ತಾಂಡವವಾಡುತ್ತಿದೆ. ವಸುದೇವಕ ಕುಟುಂಬಕಂ ಎಂಬ ಸಂದೇಶ ಇಡೀ ಜಗತ್ತಿಗೆ ತಿಳಿಸಬೇಕು. ಹಿಂದೂ ಧರ್ಮವೂ ಗಟ್ಟಿಯಾದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸುತ್ತೆ. ಜನರಲ್ಲಿ ಮಾನವೀಯ ಮೌಲ್ಯಗಳ ಮರೆಯಾಗುತ್ತಿವೆ. ಇಂತಹ ಮಾನವೀಯ ಮೌಲ್ಯಗಳನ್ನು ಉಳಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ. ರಾಘವೇಂದ್ರ ಸ್ವಾಮಿಗಳು ಎಲ್ಲ ಸಮುದಾಯಗಳ ಗುರುಗಳಾಗಿದ್ದಾರೆ. ಅವರ ಸಂದೇಶಗಳನ್ನು ನಾವು ಎಲ್ಲರೂ ಪಾಲಿಸೋಣ ಎಂದು ಕರೆ ನೀಡಿದರು.
ಶ್ರೀಮಠದ ಹೊರಭಾಗದಲ್ಲಿ ವಿಶಾಲವಾದ ಪ್ರಾಂಗಣ, ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ಗೃಹಗಳು, ಪ್ರಸಾದ್ ಸೇವೆ ಮತ್ತು ಕುಡಿಯುವ ನೀರು, ಆಸನದ ವ್ಯವಸ್ಥೆ ಹೀಗೆ ನಾನಾ ಸೌಲಭ್ಯ ಶ್ರೀಮಠದಲ್ಲಿ ಮಾಡಲಾಗಿದೆ. ಮಠದ ಅಭಿವೃದ್ಧಿಗೆ ಬದ್ಧವಾಗಿದ್ದು, ವಿಪ್ರ ಸಮಾಜದ ಸಂಘಟನೆ ಜೋತೆಗೆ ತ್ರಿಮತಸ್ಥ ವಿದ್ಯಾರ್ಥಿಗಳಿಗೆ ಬೆಂಗಳೂರು, ರಾಯಚೂರು, ಬಳ್ಳಾರಿ, ಸೇರಿದಂತೆ ನೇರೆಯ ರಾಜ್ಯಗಳಲ್ಲಿನ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಆಸ್ಪತ್ರೆ ಸೇರಿದಂತೆ ಇತರ ಸೌಲಭ್ಯಗಳು ನೀಡಲು ಶ್ರೀ ಮಠ ಕಾರ್ಯಯೋಜನೆ ಹಾಕಿಕೊಂಡಿದೆ. ಅದರಂತೆ ಹತ್ತಾರು ಕಾಮಗಾರಿಗಳು ಸಹ ಮಂತ್ರಾಲಯದಲ್ಲಿ ನಡೆದಿವೆ ಎಂದು ತಿಳಿಸಿದರು.
ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆ ಆಗುತ್ತೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಕಷ್ಟ ಅಂತ ಬಂದ ಭಕ್ತರನ್ನು ವರ ನೀಡಿ ಕರುಣಿಸುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನ ನಂಬಿ ಮಂತ್ರಾಲಯಕ್ಕೆ ಭಕ್ತರ ದಂಡೆ ಹರಿದು ಬರುತ್ತದೆ. ಶ್ರೀಮಠಕ್ಕೆ ಬಂದ ಭಕ್ತರಿಗೆ ಅನುಕೂಲವಾಗಿ ಎಂದು ಮಂತ್ರಾಲಯ ಮಠದಿಂದ ಭಕ್ತರಿಗಾಗಿ ವಿವಿಧ ರೀತಿಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಮಠದ ಸಿಬ್ಬಂದಿಗಳು ಶ್ರೀಗಳಿಗೆ ಸನ್ಮಾನಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಇತಿಹಾಸ ಬರೆದ ಗಣೇಶೋತ್ಸವ: ಸತತ 30 ಗಂಟೆಗಳ ಕಾಲ ನಡೆದ ನಿಮಜ್ಜನ ಮೆರವಣಿಗೆ