ರಾಯಚೂರು: ಪಡಿತರ ಅಕ್ಕಿ, ಗೋಧಿ ವಿತರಣೆ ನೂಕು ನುಗ್ಗಲು ಕಂಡು ಬರುತ್ತಿದೆ. ಕೊರೊನಾ ಸೋಂಕು ಭೀತಿಗೆ ಒಳಗಾದ ಕೆಲ ಅಂಗಡಿ ಮಾಲೀಕರು ಅಂಗಡಿ ಬಂದ್ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ.
ನ್ಯಾಯಬೆಲೆ ಅಂಗಡಿ ಮೂಲಕ ಕೊರೊನಾ ವೈರಸ್ ತಡೆಯಲು ಕರೆ ನೀಡಿದ ಲಾಕ್ಡೌನ್ ನಿಮಿತ್ತ ಸರ್ಕಾರ ಎರಡು ತಿಂಗಳದ ಪಡಿತರ ನೀಡಲು ಮುಂದಾಗಿದ್ದು, ಜನತೆ ನೂಕುನುಗ್ಗಲು ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಎರಡು ದಿನಗಳಿಂದ ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ, ಒಂದು ಕುಟುಂಬಕ್ಕೆ 2 ಕೆಜಿ ಗೋಧಿ ನೀಡಲಾಗುತ್ತಿದೆ. ಪಡಿತರ ಕಾರ್ಡ್ ಹೊಂದಿದವರು ಸರದಿಯಲ್ಲಿ ನಿಂತು ಪಡಿತರ ಪಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೋಗಿದ್ದು, ಭಯಾನಕತೆ ಸೃಷ್ಟಿಸಿದಂತಾಗಿದೆ.
ನೂರಾರು ಜನತೆ ಹೆಬ್ಬೆಟ್ಟು ಹಾಕಿ ಪಡಿತರ ಪಡೆಯಲು ಹಿಂದೇಟು ಹಾಕುತಿದ್ದಾರೆ. ಕೆಲವರು ಒಪ್ಪತ್ತಿನ ಊಟಕ್ಕೆ ತೊಂದರೆ ಆಗಿದ್ದು ಏನಾದರು ಆಗಲಿ ಪಡಿತರ ಸಿಗಲಿ ಎಂದು ನೂಕಾಟ ತಳ್ಳಾಟ ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಂಗೋಲಿ ಗುರುತು ಹಾಕಿದ್ದರೂ ನಿಲ್ಲುತ್ತಿಲ್ಲ. ಅನ್ಯ ರಾಜ್ಯ, ಜಿಲ್ಲೆಗಳಿಂದ ಬಂದವರಿದ್ದಾರೆ. ಮಾಸ್ಕ್, ಕೈಕವಚ ಹಾಕಿದ್ದರೂ ಕೊರೊನಾ ಸೋಂಕು ಹರಡುವ ಭೀತಿಗೆ ಒಳಗಾಗಿದ್ದೇವೆ ಎಂದು ಮಾಲೀಕ ಅಜಯ ಬ್ಯಾಳಿ ಅಳಲು ತೋಡಿಕೊಂಡಿದ್ದಾರೆ.