ಲಿಂಗಸೂಗೂರು(ರಾಯಚೂರು): ಕೃಷ್ಣಾ ಭಾಗ್ಯ ಜಲ ನಿಗಮ ರಾಜ್ಯದ ನೀರಾವರಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಸ್ಕಾಡಾ (SCADA) ಯಾಂತ್ರೀಕೃತ ತಂತ್ರಜ್ಞಾನ ಅಳವಡಿಕೆ ಮಾಡಿ ಯಶಸ್ವಿಯಾಗಿರುವುದು ಹರ್ಷ ಮೂಡಿಸಿದೆ.
ನೀರು ಸಂಸ್ಕರಣೆ ಮತ್ತು ಪೋಲಾಗದಂತೆ ತಡೆಗಟ್ಟಲು ಹಾಗೂ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯ ಕ್ರಸ್ಟ್ ಗೇಟ್, ವಿತರಣಾ ಮತ್ತು ಉಪ ಕಾಲುವೆಗಳ ಹಾಗೂ ನೇರ ತೂಬುಗಳಿಗೆ (ಡಿಪಿಎ) ಜಿಐಎಸ್ (geographical information system) ಆಧಾರಿತ ಸ್ಕಾಡಾ ಯಾಂತ್ರೀಕೃತ ತಂತ್ರಜ್ಞಾನ ವ್ಯವಸ್ಥೆಯನ್ನು ಪುಣೆಯ ಮೆ. ಮೆಕ್ಯಾಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಅಳವಡಿಸಲಾಗಿದೆ.
ವಿಶಿಷ್ಟ ತಂತ್ರಜ್ಞಾನದ ಸಾಫ್ಟವೇರ್ ಬಳಸಿ ಸ್ಯಾಟಲೈಟ್ ಸಿಸ್ಟಮ್ ಮೂಲಕ ಕುಳಿತಲ್ಲಿಯೇ ಗೇಟ್ಗಳನ್ನು ಆಪರೇಟ್ ಮಾಡಿ ಲಭ್ಯತೆ ಅಧರಿಸಿ, ರೈತರ ಅಗತ್ಯತೆ ಆಧರಿಸಿ ನೀರು ಹರಿಸುವ ಪದ್ಧತಿ 4 ವರ್ಷಗಳಿಂದ ಯಶಸ್ವಿಯಾಗಿ ನಡೆದಿದೆ. ರೂ. 139 ಕೋಟಿ ವೆಚ್ಚದಲ್ಲಿ ಮುಖ್ಯ ಕಾಲುವೆ ಮೇಲಿನ 25 ವಿತರಣಾ ಗೇಟ್, ಹುಣಸಗಿ ಶಾಖಾ ಕಾಲುವೆ ಮೇಲಿನ 25 ಗೇಟ್ ಸೇರಿದಂತೆ ಈ ವ್ಯಾಪ್ತಿಯ 335 ಉಪ ಕಾಲುವೆ ಸೇರಿ ಒಟ್ಟು 365 ಗೇಟಗಳ ನಿರ್ವಹಣೆ ಯಶಸ್ವಿಯಾಗಿ ನಡೆದಿದೆ ಎಂದು ಎಇಇ ಆರ್.ಎಲ್ ಹಳ್ಳೂರು ವಿವರಿಸಿದರು.
ಜಿಐಎಸ್ ತಂತ್ರಜ್ಞಾನ ಮೂಲಕ ಗೇಟ್ಗಳಿಗೆ ಸೆನ್ಸಾರ್ ಅಳವಡಿಸಿ ಕುಳಿತಲ್ಲಿಯೇ ನಿರ್ವಹಣೆ ಮಾಡಲಾಗುತ್ತಿದೆ. ರೈತರಿಗೆ ಮಾಹಿತಿಗೆ ಕಿಯೋಸ್ಕ್ ಯಂತ್ರ, ನೆಟ್ ವರ್ಕ್ ನಿರ್ವಹಣೆ ಮಾಹಿತಿ ನೀಡುವ ವ್ಯವಸ್ಥೆ ಕೂಡ ಇದೆ. 2ನೇ ಹಂತದಲ್ಲಿ ರೂ. 1,123ಕೋಟಿ ವೆಚ್ಚದಲ್ಲಿ ಶಹಪುರ, ಜೇವರಗಿ, ಮುಡಬಾಳ, ಇಂಡಿ ಶಾಖಾ ಕಾಲುವೆಗಳ ವ್ಯಾಪ್ತಿಯ ಅಂದಾಜು 5 ಸಾವಿರ ಗೇಟ್ ಆಪರೇಟ್ ಮಾಡಲು ಕೂಡ ಸಿದ್ಧತೆಗಳು ನಡೆದಿವೆ ಎಂದು ಸಹಾಯಕ ಇಂಜಿನಿಯರ್ ವಿಜಕುಮಾರ್ ಅರಳಿ ತಿಳಿಸಿದ್ದಾರೆ.
4 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಂಡಿದ್ದರಿಂದ ದೇಶದ ವಿವಿಧ ರಾಜ್ಯಗಳಿಂದ ಹಾಗೂ ಆಸ್ಟ್ರೇಲಿಯಾ, ನೈಜೇರಿಯಾ ಸೇರಿದಂತೆ ವಿದೇಶಿಯರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಕೇಂದ್ರ ಸಚಿವರು, ಅಧಿಕಾರಿಗಳು ಕೂಡ ಆಗಮಿಸುತ್ತಿದ್ದಾರೆ. ಸ್ಕಾಡಾ ಅಟೋಮಷಿನ್ ವ್ಯವಸ್ಥೆ ರೈತರಿಗೆ ವರವಾಗಿದ್ದು, ವಿಜಯಪುರ, ಯಾದಗಿರಿ, ಕಲಬುರ್ಗಿ ರೈತರಿಗೆ ನೀರಿನ ಸದ್ಬಳಕೆಗೆ ಸಹಕಾರಿ ಆಗಿದೆ ಎಂದು ಸಹಾಯಕ ಇಂಜಿನಿಯರ್ ಅಮರಪ್ಪ ಮಾಹಿತಿ ನೀಡಿದರು.
ನಾರಾಯಣಪುರ ಎಡದಂಡೆ ನಾಲೆಯ ಸ್ಕಾಡಾ ತಂತ್ರಜ್ಞಾನ ನಿರ್ವಹಣೆಯಲ್ಲಿ ಕೇವಲ 27 ಜನರು ಕೆಲಸ ಮಾಡುತ್ತಿದ್ದೇವೆ. ಇದೊಂದು ವಿಶೇಷ ಸಾಫ್ಟವೇರ್ ಆಗಿದೆ. ರಾಷ್ಟ್ರದಲ್ಲಿಯೇ ಇದು 2ನೇ ಕೇಂದ್ರವಾಗಿದೆ. ರಾಜ್ಯದಲ್ಲಿ ಮೊದಲ ಕೇಂದ್ರವಾಗಿದ್ದು, ಅಧ್ಯಯನಕ್ಕೆಂದು ವಿವಿಧ ರಾಜ್ಯ, ದೇಶಗಳಿಂದ ತಂತ್ರಜ್ಞರು ಬರುತ್ತಿದ್ದಾರೆ. ಸ್ಕಾಡಾ ಸಿಸ್ಟಮ್ ಅಣೆಕಟ್ಟೆ ಅಧಿಕಾರಿಗಳಿಗೂ, ರೈತರಿಗೂ ಕುಳಿತಲ್ಲಿಯೇ ಮೇಲುಸ್ತುವಾರಿ ಮತ್ತು ನಿರ್ವಹಣೆ ಹಾಗೂ ಮಾಹಿತಿ ಪಡೆದುಕೊಳ್ಳಲು ಸಹಕಾರಿ ಆಗಿದೆ ಎಂದು ಸ್ಕಾಡಾ ಕೇಂದ್ರದ ನೌಕರ ಅನಿಲ ಮಾಹಿತಿ ನೀಡಿದ್ದಾರೆ.