ಲಿಂಗಸುಗೂರು(ರಾಯಚೂರು): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯವಸ್ಥಿತವಾಗಿ ಎಸ್ಸಿ,ಎಸ್ಟಿಯವರನ್ನು ಹತ್ತಿಕ್ಕುವ ಹುನ್ನಾರ ನಡೆಸಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪರಿಶಿಷ್ಟ ವರ್ಗಕ್ಕೆ ವಿವಿಧ ಯೋಜನೆಗಳಡಿ ನೀಡುವ ಅನುದಾನ ಅನ್ಯ ಕಾರ್ಯಕ್ಕೆ ಬಳಸುತ್ತಿದ್ದಾರೆ. ಪರಿಶಿಷ್ಟರ ವಿದ್ಯಾರ್ಥಿ ವೇತನ ಕಡಿತಗೊಳಿಸಿದ್ದು ಬಿಜೆಪಿ ತನ್ನ ಸಿದ್ದಾಂತಕ್ಕೆ ವೇದಿಕೆ ನಿರ್ಮಿಸಿಕೊಳ್ಳುತ್ತಿದೆ" ಎಂದರು.
ಸಂವಿಧಾನದ ಮೂಲ ಆಶಯಗಳಿಗೆ ತಿಲಾಂಜಲಿ ಹೇಳಲು ಧರ್ಮಾಧರಿತ ವಿಚಾರಗಳಿಂದ ಜನತೆಗೆ ವಂಚಿಸುತ್ತಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ. ಕಾಲಘಟ್ಟದಲ್ಲಿ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ. ಪ್ರವಾಹ, ಕೋವಿಡ್ನಂತಹ ಹಲವು ವಿಚಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ನೋವುಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ ಎಂದರು.