ರಾಯಚೂರು: ಬಾಣಂತಿಯರಿಗೆ ಆರೋಗ್ಯ ಸೇವೆಯ ಹಕ್ಕುಗಳನ್ನು ದೊರಕಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರದಲ್ಲಿ ದೂರು ನಿವಾರಣಾ ವ್ಯವಸ್ಥೆ ಮಾಡಬೇಕೆಂದು ಜಾಗೃತ ಮಹಿಳಾ ಸಂಘಟನೆಯ ಮುಖಂಡ ದೇವಿಪುತ್ರ ಒತ್ತಾಯಿಸಿದರು.
ಜಾಗೃತ ಮಹಿಳಾ ಸಂಘಟನೆ ಹಾಗೂ ದಲಿತ ಮಾನವ ಹಕ್ಕುಗಳ ವೇದಿಕೆಯಿಂದ ನಡೆಸಿದ ಸಮೀಕ್ಷೆಯ ಪ್ರಕಾರ ಜಿಲ್ಲೆಯ ಮಾನವಿ ಮತ್ತು ಸಿಂಧನೂರು ತಾಲೂಗಳಲ್ಲಿ ಕೇವಲ 32% ಗರ್ಭಿಣಿಯರಿಗೆ ಮಾತ್ರ ಬಿ.ಪಿ, ಹೊಟ್ಟೆ, ರಕ್ತ ತಪಾಸಣೆ ಮಾಡಲಾಗುತ್ತಿದೆ. ಕಬ್ಬಿಣಾಂಶದ ಗುಳಿಗೆಗಳು ನೀಡುವುದು ಬಿಟ್ಟರೆ ಸೇವೆಯ ಸರಿಯಾದ ಮಾಹಿತಿ ನೀಡುತ್ತಿಲ್ಲ. ಗ್ರಾಮಗಳಲ್ಲಿ ಆರೋಗ್ಯ ಮತ್ತು ಪೌಷ್ಠಿಕ ಪರೀಕ್ಷೆಗಳು ಕಾಟಾಚಾರಕ್ಕೆ ನಡೆಯುತ್ತಿವೆ. ಆರೋಗ್ಯ ಉಪ ಕೇಂದ್ರಗಳಲ್ಲಿ ಎಎನ್ಎಂ ವಾಸವಿಲ್ಲ, ಕೇಂದ್ರಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲ ಎಂದು ದೂರಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ವೈದ್ಯರಿಲ್ಲ, ಸಿಬ್ಬಂದಿಗಳ ಕೊರತೆಯಿಂದ ಅನೇಕ ಸಾವುಗಳು ಸಂಭವಿಸಿವೆ. ಕೊರೊನಾ ನೆಪವಾಗಿಸಿಕೊಂಡು ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಸರ್ಕಾರ ಕೂಡಲೇ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಯಂತ್ರಗಳು, ರಕ್ತ ಶೇಖರಣೆ ಘಟಕಗಳು, ನವಜಾತ ಶಿಶು ರಕ್ಷಣೆ ಘಟಕ ತುರ್ತು ವಾಹನ ಸೇವೆ ಇರುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮುಖಂಡರಾದ ಚೆನ್ನಮ್ಮ, ನರಸಮ್ಮ, ಗಂಗಾಧರ ಉಪಸ್ಥಿತರಿದ್ದರು.