ರಾಯಚೂರು : 'ನಾನು ಮೂವತ್ತೈದು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀನಿ. ಸೇವೆಯಿಂದ ನಿವೃತ್ತಿಯಾಗಿ 9 ತಿಂಗಳಾಯಿತು. ಆದ್ರೆ, ನನಗೆ ಕೊಡಬೇಕಾದ ಪಿಂಚಣಿಯನ್ನು ಇನ್ನೂ ಪಾವತಿ ಮಾಡುತ್ತಿಲ್ಲ. ನನಗೀಗ ವಿಷ ಕುಡಿಯೋದು ಒಂದೇ ಉಳಿದಿರುವ ಮಾರ್ಗ. ಕೊರೊನಾ ಲಾಕ್‌ಡೌನ್ ಬಂದ್ಮೇಲೆ ಊಟಕ್ಕೂ ತ್ರಾಸ ಆಗೈತಿ. ಪಿಂಚಣಿ ಹಣವನ್ನು ದಯಮಾಡಿ ಕೊಡ್ರಿ, ಇಲ್ಲ ಅಂದ್ರೆ ನನಗೆ ವಿಷ ಕೊಡಿಯೋದೊಂದೇ ಬಾಕಿ ಉಳಿದಿರುವ ದಾರಿ...' ಎಂದು ನಿವೃತ್ತ ಅಧಿಕಾರಿ ತಮ್ಮ ನೋವು ವ್ಯಕ್ತಪಡಿಸಿದರು.
ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ (ಬಿಇಒ) ಪತ್ರಾಂಕಿತ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿರುವ ಜಯತೀರ್ಥಾಚಾರ್ಯ ಈಗ ಸಂಕಷ್ಟದಲ್ಲಿದ್ದಾರೆ. ನಗರದ ಜವಾಹರನಗರದಲ್ಲಿ ವಾಸವಿರುವ ಇವರ ಕುಟುಂಬ, ಲಾಕ್‌ಡೌನ್‌ನಿಂದಾಗಿ ಊಟಕ್ಕೂ ಮತ್ತೊಬ್ಬರ ಬಳಿ ಅಂಗಲಾಚುವ ಪರಿಸ್ಥಿತಿಯಲ್ಲಿದೆ.
2019 ಜೂನ್ 30 ಕ್ಕೆ ಜಯತೀರ್ಥಾಚಾರ್ಯ ನಿವೃತ್ತಿಯಾಗಿದ್ದು, ಇದುವರೆಗೂ ನಿವೃತ್ತಿ ವೇತನ, ಪಿಂಚಣಿ ಕೈಸೇರಿಲ್ಲ. ಹಣಕಾಸಿನ ತೀವ್ರ ಮುಗ್ಗಟ್ಟು ಒಂದೆಡೆಯಾದ್ರೆ, ನರದೌರ್ಬಲ್ಯದ ನೋವು ಮತ್ತೊಂದೆಡೆ. ಹಾಗಾಗಿ, ಎದ್ದು ಓಡಾಡುವುದು ಕಷ್ಟವಾಗುತ್ತಿದೆ. ಇತ್ತ ಮಗನಿಗೂ ವಂಶಪಾರಂಪರಿಕವಾಗಿ ಬಂದಿರುವ ರೋಗದ ಗುಣಲಕ್ಷಣಗಳಿವೆ. ಕೆಲಸ ಮಾಡುವ ಪರಿಸ್ಥಿತಿಯಲ್ಲಿ ಆತನಿಲ್ಲ. ಹೀಗಾಗಿ ಈ ಕುಟುಂಬಕ್ಕೆ ನಿವೃತ್ತಿ ವೇತನವೇ ಜೀವನ ನಿರ್ವಹಣೆಗೆ ಆಧಾರ.
ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಿಂದ ಸರಿಯಾದ ದಾಖಲೆಗಳನ್ನು ಮಹಾಲೇಖಪಾಲರ ಕಚೇರಿಗೆ ಕಳುಹಿಸದ ಕಾರಣ ನಿವೃತ್ತಿ ವೇತನ ಬಿಡುಗಡೆಯಾಗಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.