ರಾಯಚೂರು: ಕಳೆದ ಹಲವು ದಿನಗಳಿಂದ ನಗರದ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನುರಾರು ವಿದ್ಯಾರ್ಥಿಗಳು ಕುಡಿಯುವ ನೀರು, ಕರೆಂಟ್ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಪಾಲಕರು ಸಂಬಂಧಪಟ್ಟ ಅಧಿಕಾರಳ ಮೇಲೆ ಗರಂ ಆಗಿದ್ದಾರೆ.
ವಸತಿ ನಿಲಯದಲ್ಲಿ 500 ವಿದ್ಯಾರ್ಥಿಗಳಿದ್ದು, ಕಳೆದ ವಾರದಿಂದ ವಿದ್ಯುತ್, ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀರು ಬೇಕೆಂದ್ರೆ ಅಪಾಯದ ಅಂಚಿನ ಮೇಲೆ ನಿಂತು ನೀರು ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಕ್ಕೆ, ಸ್ನಾನಕ್ಕೆ, ತಟ್ಟೆ ತೊಳೆಯುವುದಕ್ಕೆ ನೀರಿಲ್ಲದೆ ಪರದಾಡುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಇಷ್ಟೊಂದು ಜನ ವಿದ್ಯಾರ್ಥಿಗಳ ಪ್ರವೇಶಾತಿ ಪಡೆದುಕೊಂಡಿರುವ ವಸತಿ ನಿಲಯ, ಮೂಲಭೂತ ಸೌಲಭ್ಯ ಒದಗಿಸಬೇಕು. ಆದ್ರೆ ಅವುಗಳನ್ನು ಸಮರ್ಪಕವಾಗಿ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಗಳು ಎಡವಿದ್ದಾರೆ. ಇದರಿಂದ ನುರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಇದರಿಂದ ಬೇಸತ್ತ ಕೆಲ ವಿದ್ಯಾರ್ಥಿಗಳು ಪಾಲಕರಿಗೆ ಕರೆ ಮಾಡಿ ನಮಗೆ ವಸತಿ ನಿಲಯದಲ್ಲಿರಲು ಆಗುತ್ತಿಲ್ಲ, ಕರೆದೊಯ್ಯುವಂತೆ ಹೇಳುತ್ತಿದ್ದಾರೆ. ಮಕ್ಕಳ ಕಷ್ಟ ನೋಡದ ಪಾಲಕರು ಕೆಲ ಮಕ್ಕಳನ್ನು ವಸತಿ ನಿಲಯದಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿಲಯದ ಪ್ರಾಚಾರ್ಯರನ್ನ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆ ಉಂಟಾಗಿದ್ದು ನಿಜ. ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸದ್ಯ ತಾತ್ಕಾಲಿಕವಾಗಿ ಪಕ್ಕದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅದಷ್ಟು ಬೇಗೆ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ.