ರಾಯಚೂರು: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಿದೆ ಇಲ್ಲಿ ಅಕ್ಷರಶಃ ನಿಜವೆನಿಸುತ್ತದೆ. ರಾಯಚೂರು ಎಪಿಎಂಸಿ ವ್ಯಾಪ್ತಿಗೆ ಬರುವ ರೈತ ಸಮುದಾಯ ಭವನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ ವರ್ಷವಾಗುತ್ತಿದ್ದರೂ ಇನ್ನೂ ಮುಚ್ಚಿದ ಬಾಗಿಲು ತೆಗೆದೆ ಇಲ್ಲ ಎಂಬುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದ ಗಂಜ್ ಬಳಿಯ ಹಳೆಯ ರೈತ ಭವನ ಸಾರ್ವಜನಿಕರಿಗೆ, ರೈತರಿಗೆ ಅನುಕೂಲವಾಗಿತ್ತು. ಆದರೆ, ಅದು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ಕೆಡವಿ ಹೊಸ ಕಟ್ಟಡಕ್ಕೆ ಅಡಿಗಲ್ಲು ಹಾಕಿ ಕಟ್ಟಡ ಕಾರ್ಯ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಿಲ್ಲ.
ಎಪಿಎಂಸಿ ಅನುದಾನದಲ್ಲಿ 2014-15ನೇ ಕ್ರಿಯಾ ಯೋಜನೆ ಅಡಿ ಸಮುದಾಯವನ್ನು ಕೈಗೆತ್ತಿಕೊಳ್ಳಲಾಗಿತ್ತು. 2016ರಲ್ಲಿ ಅಂದಿನ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಎಪಿಎಂಸಿಯ ₹3.80 ಕೋಟಿ ಅನುದಾನ ಅಡಿ 3 ಮಹಡಿಯ ಬೃಹತ್ ಕಟ್ಟಡದ ಕೆಲಸ ಪೂರ್ಣಗೊಂಡು, 2018ರಲ್ಲಿ ಉದ್ಘಾಟನೆ ನೆರವೇರಿತು.
ಈ ಕುರಿತು ಎಪಿಎಂಸಿಯ ಆಡಳಿತ ಮಂಡಳಿಗೆ ಕೇಳಿದರೆ, ಕಾಮಗಾರಿ ಎಲ್ಲಾ ಮುಗಿದಿದ್ದು. ಸಮುದಾಯ ಭವನದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ದರ ನಿಗದಿಯ ಕುರಿತು ಚರ್ಚೆಯಾಗಬೇಕು. ಎಂಜಿನಿರ್ಗಳಿಂದ ದರ ನಿಗದಿಯಾದ ನಂತರ ಕಾರ್ಯದರ್ಶಿಗಳಿಂದ ಅನುಮತಿ ಪಡೆದು ಶೀಘ್ರವೇ ಕಾರ್ಯಾರಂಭವಾಗಲಿದೆ ಎಂದು ಹೇಳುತ್ತಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಜಿಲ್ಲಾಡಳಿತ ಇತ್ತ ಗಮನಹರಿಸಬೇಕು. ಇಲ್ಲವಾದರೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡದ್ದಾರೆ.