ರಾಯಚೂರು: ನಾರಾಯಣಪುರ ಬಲದಂಡೆ ಮುಖ್ಯನಾಲೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಟಿಪ್ಪರ್ ಮುಗುಚಿ ಸಾವನ್ನಪ್ಪಿದ ಕಾರ್ಮಿಕನ ಮೃತದೇಹ ಪತ್ತೆಯಾಗುವವರೆಗೂ ಟಿಪ್ಪರ್ ಮೇಲೆತ್ತದಂತೆ ಸಂಬಂಧಿಕರು ಪಟ್ಟು ಹಿಡಿದರು.
ಸಿಂದಗಿ ತಾಲೂಕಿನ ಅಸ್ಕಿ ಗ್ರಾಮದ ಆನಂದ ವಾಲೇಕಾರ (24) ನಾಪತ್ತೆಯಾದ ಕಾರ್ಮಿಕ. ಲಿಂಗಸುಗೂರು ತಾಲೂಕಿನ ಜಂಗಿರಾಂಪೂರ ತಾಂಡಾ ಬಳಿ ಮುಖ್ಯನಾಲೆಗೆ ಶುಕ್ರವಾರ ಮಧ್ಯಾಹ್ನ ಕಾರ್ಮಿಕರನ್ನು ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್ ಕಾಲುವೆಗೆ ಬಿದ್ದಿತ್ತು. ಟಿಪ್ಪರ್ನಲ್ಲಿ ಪ್ರಯಾಣಿಸುತ್ತಿದ್ದ 15ಕ್ಕೂ ಹೆಚ್ಚು ಕಾರ್ಮಿಕರ ಪೈಕಿ ಓರ್ವನನ್ನು ಬಿಟ್ಟು, ಉಳಿದೆಲ್ಲರೂ ಈಜಿ ದಡ ಸೇರಿದ್ದಾರೆ. ನಾಲಾ ಆಧುನೀಕರಣ ಗುತ್ತಿಗೆದಾರ ಕಂಪೆನಿ, ವ್ಯವಸ್ಥಾಪಕ ಕಾರ್ಮಿಕನ ಮೃತದೇಹ ಹುಡುಕುವ ಬದಲು ಟಿಪ್ಪರ್ ಮೇಲೆತ್ತಲು ಮುಂದಾದ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗುವವರೆಗೂ ಟಿಪ್ಪರ್ ಮೇಲೆತ್ತದಂತೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿದ್ದಾರೆ.
ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಮಧ್ಯಪ್ರವೇಶಿಸಿ, ಮೃತದೇಹ ಹುಡುಕಾಟ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದರು. ವಾತಾವರಣ ತಿಳಿಗೊಳ್ಳುತ್ತಿದ್ದಂತೆ ನಾಲಾ ಆಧುನೀಕರಣ ಗುತ್ತಿಗೆದಾರ ಕಂಪೆನಿ ವ್ಯವಸ್ಥಾಪಕ ಹಾಗೂ ಇತರೆ ನೌಕರರು ಮೃತದೇಹ ಪತ್ತೆಗೆ ಮುಂದಾಗಿದ್ದಾರೆ.