ರಾಯಚೂರು: ಕೃಷ್ಣ ಹಾಗೂ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಜಿಲ್ಲೆಗೆ ಪ್ರವಾಹ ಭೀತಿ ಉಂಟಾಗಿದೆ. ಜಿಲ್ಲಾಡಳಿತ ಮುನ್ನಚರಿಕೆ ಕ್ರಮವಾಗಿ ಜಿಲ್ಲೆಯ ಅರೆಸೇನಾ ಪಡೆಯನ್ನು ಕರೆಸಲಾಗಿದೆ. ಕರ್ನಲ್, ಮೇಜರ್, ಜೆ.ಸಿ.ಒ. ಹಾಗೂ 37 ಸೈನಿಕರು ತಂಡದಲ್ಲಿದ್ದಾರೆ.
ನಗರದ ಹೊರವಲಯದ ಯರಮರಸ್ ಸರ್ಕ್ಯೂಟ್ ಹೌಸ್ ಬಳಿಯ ಡಿ.ಟಿ.ಐನಲ್ಲಿ ವಾಸ್ತವ್ಯ ಮಾಡಿದ್ದು, ಕೆಲ ಕ್ಷಣಗಳಲ್ಲಿ ಮೂರು ತಂಡಗಳಾಗಿ ವಿಭಾಜಿಸಿ ಲಿಂಗಸೂಗೂರು, ದೇವದುರ್ಗ, ರಾಯಚೂರುಗೆ ತೆರಳಿದ್ದಾರೆ. ಈ ಮೂಲಕ ಪ್ರವಾಹವನ್ನ ಎದುರಿಸಲು ತಂಡ ಸಜ್ಜಾಗಿದೆ.
ನಾರಾಯಣಪುರ ಜಲಾಶಯದಿಂದ ಬೆಳಿಗ್ಗೆ 6 ಗಂಟೆಯ ಸುಮಾರಿಗೆ 19 ಗೇಟ್ಗಳ ಮೂಲಕ ಅಂದಾಹು 3.69 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.