ರಾಯಚೂರು: ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ರಾಯಚೂರು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜಾ ಶ್ರೀನಿವಾಸ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಖಾಸಗಿ ಶಾಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಿಸಬೇಕು. ಒಂದು ವೇಳೆ ಘೋಷಣೆ ಮಾಡಲು ಸಾಧ್ಯವಾಗದಿದ್ದರೆ ಶಾಲಾ ಪ್ರಾರಂಭ ದಿನಾಂಕ ಘೋಷಿಸಬೇಕು. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಕೆಲಸವಿಲ್ಲದೆ ಮಾಸಿಕ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ನೋಂದಾಯಿತ ಅಧಿಕೃತ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಗುರುತಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದರು.
ಶಾಲಾ-ಕಾಲೇಜು ಸಂಸ್ಥೆಗಳ ವಾಹನಗಳ ಸಾಲಿನ ಸಾಹಿತ್ಯದ ಪಾವತಿ ಕಂತುಗಳನ್ನು ಮುಂದಿನ ಮೂರು ತಿಂಗಳು ವಿಸ್ತರಿಸಬೇಕು. ಆರ್ಟಿಇ ಹಣ ಪಾವತಿಸಬೇಕು, ಶಿಕ್ಷಣ ಸಚಿವರು ಖಾಸಗಿ ಶಿಕ್ಷಕರ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ರಾಮಾಂಜನೇಯಲು, ಎಸ್.ಕೆ ನಾಗಿರೆಡ್ಡಿ, ಜಿ. ರವಿ, ಎನ್. ಶೇಖರ್ ಉಪಸ್ಥಿತರಿದ್ದರು.