ರಾಯಚೂರು : ಜಿಲ್ಲೆಯಲ್ಲಿ ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಗೆ ನೀರು ನುಗ್ಗಿದ್ದು, ರೈತರ ಬೆಳೆ ನೀರು ಪಾಲಾದ ಘಟನೆ ನಗರದಲ್ಲಿ ನಡೆಯಿತು.
ನಗರದ ಎಪಿಎಂಸಿ ಪ್ರಾಂಗಣದಲ್ಲಿ ರೈತರು ತಾವು ಬೆಳೆದ ಫಸಲು ಮಾರಾಟ ಮಾಡಲು ಮಾರುಕಟ್ಟೆಯಲ್ಲಿನ ವರ್ತಕರ ಅಂಗಡಿಗಳ ಮುಂದೆ ಹಾಕಿದ್ದರು. ಮಳೆ ಸುರಿದ ಪರಿಣಾಮ ಪ್ರಾಂಗಣದ ಒಳಗೆ ನೀರು ನುಗ್ಗಿದ್ದು, ಫಸಲು ನೀರು ಪಾಲಾಗಿದೆ. ಈ ವೇಳೆ ರೈತರು ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳಲು ಹರಸಹಾಸ ಪಟ್ಟರು.
ಲಾಕ್‌ಡೌನ್ ಸಡಲಿಕೆಯಿಂದ ಗ್ರಾಮೀಣ ಭಾಗದ ರೈತರು ಬೆಳೆ ಮಾರಾಟಕ್ಕೆ ಬಂದಿದ್ದು, ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಹಾಗಾಗಿ, ಕೂಡಲೇ ಎಪಿಎಂಸಿ ಆಡಳಿತ ಮಂಡಳಿ ಎಚ್ಚೆತ್ತು, ಇನ್ನುಮುಂದೆ ಪ್ರಾಂಗಣದಲ್ಲಿ ಮಳೆ ನೀರು ನಿಲ್ಲದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ಬೆಳೆಹಾನಿ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.