ರಾಯಚೂರು: ಸಫಾರಿ ಕರ್ಮಚಾರಿಗಳು ಸಾಲ ಸೌಲಭ್ಯಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ತಂತ್ರಾಂಶದಲ್ಲಿ ನಮೂದಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆ, ಸಂಜೆಯೊಳಗೆ ಸಂಪೂರ್ಣ ಮಾಹಿತಿ ನೀಡದಿದ್ದಲ್ಲಿ ಅಮಾನತ್ತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಕರ್ಮಚಾರಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ಪಡೆಯಲು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿಗಳನ್ನು ನಿಗದಿತ ಸಮಯಕ್ಕೆ ತಂತ್ರಾಂಶದಲ್ಲಿ ನಮೂದಿಸಲು ನೋಡಲ್ ಅಧಿಕಾರಿ ಮಹೇಂದ್ರ ಕುಮಾರ್ ನಿರ್ಲಕ್ಷ್ಯ ವಹಿಸಿ ಅಸಮರ್ಪಕ ಉತ್ತರ ನೀಡಿದ ಹಿನ್ನೆಲೆ ಸಂಜೆಯೊಳಗೆ ಅರ್ಜಿಗಳನ್ನು ಅಪಲೋಡ್ ಮಾಡುವಂತೆ ಡಿಸಿ ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಸಫಾಯಿ ಕರ್ಮಚಾರಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಆದರೆ ಅವರನ್ನ ಗುರುತ್ತಿಸಲು ಕಾಲಹರಣ ಮಾಡಿದಲ್ಲದೆ. ಅಪ್ಲೋಡ್ ಮಾಡದ ಕಾರಣ ಕೇಂದ್ರ ಆಯೋಗ ಪತ್ರ ಬರೆದಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಖಂ, ಸಹಾಯಕ ಆಯುಕ್ತ ಸಂತೋಷ ಕಾಮರೆಡ್ಡಿ, ಸೇರಿದಂತೆ ಅಧಿಕಾರಿಗಳು ಇದ್ದರು.