ಲಿಂಗಸುಗೂರು(ರಾಯಚೂರು): ಇಂದು ಬೆಳಗ್ಗೆ ಮಸ್ಕಿ ನಾಲೆಗೆ ಇಬ್ಬರು ಯುವಕರು ಬಹಿರ್ದೆಸೆಗೆ ಹೋಗಿದ್ದ ವೇಳೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ಅವರು ನಡುದಿಬ್ಬದಲ್ಲೇ ಸಿಲುಕಿಕೊಂಡು ರಕ್ಷಣೆಗಾಗಿ ಪರದಾಡಿದ್ದಾರೆ.
ಮಸ್ಕಿ ನಾಲಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆ ಬೀಳುತ್ತಿದ್ದರಿಂದ ಬೆಳಗಿನ ಜಾವ 3 ಗಂಟೆಯಿಂದ 200 ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಹಂತ ಹಂತವಾಗಿ ನೀರಿನ ಪ್ರಮಾಣವನ್ನು ಹೆಚ್ಚಿಸಿದ್ದು, 8 ಗಂಟೆ ವೇಳೆಗೆ ನೀರಿನ ಹರಿವನ್ನು 1,600 ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚೆನ್ನಬಸವ ಮತ್ತು ಜಲೀಲ ಎಂಬುವರು ಎಂದಿನಂತೆ ಮಸ್ಕಿ ನಾಲಾದ ಬಳಿ ಬಹಿರ್ದೆಸೆಗೆ ತೆರಳಿದ್ದರು. ಆದರೆ, ಅವರು ಮರಳಿ ಬರುವಷ್ಟರಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಆಗ ದಿಬ್ಬ ಮತ್ತು ಮುಳ್ಳುಕಂಟಿಗಳ ಆಶ್ರಯದಲ್ಲಿ ರಕ್ಷಣೆ ಪಡೆದಿದ್ದಾರೆ.
ಯುವಕರು ರಕ್ಷಣೆಗಾಗಿ ಮೊರೆ ಇಡುತ್ತಿದ್ದು, ಸ್ಥಳೀಯರು ಅವರ ರಕ್ಷಣೆಗೆ ಮುಂದಾಗಿದ್ದಾರೆ. ತಾಲೂಕು ಆಡಳಿತದ ಅಧಿಕಾರಿಗಳು ಇನ್ನೂ ಸ್ಥಳಕ್ಕೆ ಬಂದಿಲ್ಲವೆಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.