ರಾಯಚೂರು: ಹಟ್ಟಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ (ಚಿನ್ನದಗಣಿ) ಪಟ್ಟಣದ ಗುಂಡೂರಾವ್ ಕಾಲೊನಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ, ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮೃತ ಮಂಜುಳಾ ಅವರ ಮಗ ಸಚಿನ್‌ಪಾಲ್ ಅವರು ಇದು ಆತ್ಮಹತ್ಯೆ ಅಲ್ಲ, ಕೊಲೆ ಮಾಡಲಾಗಿದೆ ಎಂದು ಕಳೆದ ಭಾನುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಜುಳಾ ಅವರು ಮೃತಪಟ್ಟ 8 ರಿಂದ 10 ದಿನಗಳ ಹಿಂದೆ ಐಸಿಐಸಿಐ ಬ್ಯಾಂಕ್‌ನಿಂದ 10 ಲಕ್ಷ ರೂಪಾಯಿ ಹಣ ಸಾಲ ಮಾಡಿ, ಹಣವನ್ನು ಡ್ರಾ ಮಾಡಿಕೊಂಡು ಮನೆಯಲ್ಲಿ ಇಟ್ಟಿದ್ದರು. ದೈಹಿಕವಾಗಿ ಹಾಗೂ ಮಾನಸಿಕವಾಗಿ ನನ್ನ ತಾಯಿ ಚೆನ್ನಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಕರ್ತವ್ಯಕ್ಕೆ ತೆರಳುತ್ತಿದ್ದರು.
2023 ಅ. 24 ರಂದು ರಾತ್ರಿ 8 ಗಂಟೆಗೆ ತನ್ನ ತಂಗಿಯನ್ನು ಹಟ್ಟಿಯಿಂದ ಬೆಂಗಳೂರಿಗೆ ಕಾಲೇಜಿಗೆ ಬೀಡಲು ಹೋಗಿದ್ದೆ. ಆಗ ನನ್ನ ತಾಯಿ ಸಾವಿನ ಸುದ್ದಿ ಕೇಳಿ ದಿಗ್ಭ್ರಮೆಗೊಂಡೆ. ಅಲ್ಲಿಂದ ಬಂದು ತಾಯಿ ಮೃತದೇಹವನ್ನು ನೋಡಿದಾಗ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ. ಮನೆಯಲ್ಲಿ 10 ಲಕ್ಷ ರೂಪಾಯಿ ಹಣ ಹಾಗೂ ಸುಮಾರು 40 ತೊಲಾ ಚಿನ್ನಭಾರಣ ಇತ್ತು. ಆದರೆ ಕುಟುಂಬದ ಸದಸ್ಯರು ಹುಡುಕಿದಾಗ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕಾಣುತ್ತಿಲ್ಲ.
ಹೀಗಾಗಿ ಅ. 26ರಂದು ನನ್ನ ತಾಯಿಯನ್ನು ಬ್ಯಾಕ್ಮೇಲ್ ಮಾಡಿ ಜೆ.ಎಂ.ಆರ್ ಕಾಲೊನಿ ಹತ್ತಿರದ ಟಿನ್ಶೆಡ್ಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಹಾಗೂ ನನ್ನ ತಾಯಿ ಶವವನ್ನು ನಾಶ ಪಡಿಸಲು ಕೆಮಿಕಲ್ ಬಳಸಿ ವ್ಯವಸ್ಥಿತವಾಗಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತವಾಗಿ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷೆ ನೀಡಬೇಕು ಎಂದು ಮೃತಳ ಮಗ ಸಚಿನ್‌ಪಾಲ್ ಪೊಲೀಸರಿಗೆ ದೂರು ನೀಡಿದ್ದಾನೆ.
ಅಲ್ಲದೇ ತಮ್ಮ ಪತಿ ಮೃತಪಟ್ಟಿರುವುದರಿಂದ ಮನನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಘಟನೆ ನಡೆದ ದಿನದಂದು ಸಹೋದರ ದೂರಿನ ಮೇರೆಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಆದರೆ, ಮಗನ ದೂರಿನ ಮೇರೆಗೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಯಚೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ.. ಸಹೋದರನಿಂದ ಆತ್ಮಹತ್ಯೆ ಪ್ರಕರಣ ದಾಖಲು