ರಾಯಚೂರು: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಮದ್ಯ ನಿಷೇಧ ಆದೋಂಲನ ಸಮಿತಿ ವತಿಯಿಂದ ರಾಯಚೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ.
ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಮಹಾತ್ಮಗಾಂಧಿ ಪುತ್ಥಳಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ಬಳಿಕ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ತಮ್ಮ ಧರಣಿ ಮುಂದುವರೆಸಿದ್ದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಳವಾಗುತ್ತಿದೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ಮದ್ಯ ಮಾರಾಟದಿಂದ ಬಡಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಬಡವರ ಬದುಕು ಮೂರೆಬಟ್ಟೆಯಾಗಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದಂತೆ ಮೌನವಹಿಸಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು.
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಕಳೆದ ಐದು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಈಗಲೂ ನಿಷೇಧವಾಗಿಲ್ಲ. ಹೀಗಾಗಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಆನ್‌ಲೈನ್ ಮದ್ಯ ಮಾರಾಟ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಪಾರ್ಕಿಂಗ್ ಪಾಲಿಸಿ 2.0: ವಸತಿ ಪ್ರದೇಶಗಳ ಪಾರ್ಕಿಂಗ್ಗೂ ಶುಲ್ಕ ನಿಗದಿ
ಬೆಳಗ್ಗೆಯಿಂದ ಟಿಪ್ಪು ಸುಲ್ತಾನ್ ಉದ್ಯಾನದ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು. ಧರಣಿ ಸ್ಥಳದಲ್ಲಿ ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಮಹಾತ್ಮಗಾಂಧಿ ಪುತ್ಥಳಿ ಬಳಿ ಹೋರಾಟ ನಡೆಸುವುದಾಗಿ ಧರಣಿ ನಿರಂತರ ಮುಂದಾದರು. ಆಗ ಪೊಲೀಸರು ಮುಷ್ಕರ ತಡೆಯಲು ಮುಂದಾದರು. ಆಗ ಹೋರಾಟಗಾರರು, ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಾ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ನಿಯೋಜನೆ ಮಾಡಲಾಗಿತ್ತು. ಇದಾದ ಬಳಿಕ ಎಸ್ಪಿಯವರಿಗೆ ಮನವಿ ಸಲ್ಲಿಸಿದ ಬಳಿಕ ಮಹಾತ್ಮಗಾಂಧಿ ಪುತ್ಥಳಿ ಬಳಿ ಧರಣಿ ಮುಂದುವರೆಸಲು ನೀಡಿದ ನಂತರ ಟಿಪ್ಪು ಸುಲ್ತಾನ್ ಉದ್ಯಾನದಿಂದ ಮಹಾತ್ಮಗಾಂಧಿ ಪುತ್ಥಳಿವರೆಗೆ ಪಾದಯಾತ್ರೆ ಮೂಲಕ ತೆರಳಿದರು.