ರಾಯಚೂರು: ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣ ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಕಾಮಗಾರಿ ಪೂರ್ಣಗೊಳ್ಳದೇ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು.., ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತರಾತುರಿಯಲ್ಲಿ ಈ ಕ್ರೀಡಾಂಗಣದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ್ದರು. ಆದ್ರೆ ವಿಧಾನಸಭೆ ಚುನಾವಣೆ ಮುಗಿದು ಲೋಕಸಭಾ ಚುನಾವಣೆ ಬಂದರೂ ಈವರೆಗೆ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಜಿಲ್ಲೆಯಲ್ಲಿ ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಅನೇಕರಿದ್ದು, ನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿ ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ. ನಗರದ ಏಕೈಕ ಸಾರ್ವಜನಿಕ ಕ್ರೀಡಾಂಗಣವಾದ ಸದರಿ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ 2015-16 ನೇ ಸಾಲಿನಲ್ಲಿ ಮುಗಿಯಬೇಕಿತ್ತು. ಆದರೆ ವರ್ಷಗಳೇ ಗತಿಸಿದ್ದರೂ ಇಲ್ಲಿ ಇಂದಿಗೂ ಅಲ್ಲಲ್ಲಿ ಮಣ್ಣು, ಕಲ್ಲು, ಕಂಕರ್ ಹಾಕಿದ್ದು ಅಂತಿಮ ಹಂತದಲ್ಲಿದೆ ಎಂದು ಇನ್ನೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕ್ರೀಡಾಸಕ್ತರ ಆಕ್ರೋಶಕ್ಕೆ ಗುರಿಯಾಗಿದೆ.
ಮಕ್ಕಳಿಗಿಲ್ಲ ಬೇಸಿಗೆ ಸವಿಯುವ ಭಾಗ್ಯ :
ಈ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಧ್ವಜಾರೋಹಣ ಸೇರಿದಂತೆ ಇತರೆ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡಲಾಗುತ್ತಿತ್ತು.
ಅಲ್ಲದೇ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಸ್ವಿಮಿಂಗ್ ಫೂಲ್ ಇದ್ದು ಕೆಲ ಕಿಡಿಗೇಡಿಗಳಿಂದ ಹಾಳಾಗಿದೆ. ಈಜುಕೊಳದ ಕಾಮಗಾರಿಗಾಗಿಯೇ 15 ಲಕ್ಷ ರೂ. ಬಿಡುಗಡೆಯಾಗಿದ್ದು ಇದೂ ಪೂರ್ಣಗೊಂಡಿಲ್ಲ. ಹೀಗಾಗಿ ಬೇಸಿಗೆ ರಜೆ ಕಳೆಯಲು ಈಜುಕೊಳಕ್ಕೆ ಮಕ್ಕಳು ಬರುತ್ತಿಲ್ಲ.
ಕ್ರೀಡಾಂಗಣ ಕಾಮಗಾರಿ ವಿಳಂಬದ ಬಗ್ಗೆ ಜಿಲ್ಲಾಧಿಕಾರಿ ಮಾತ್ರವಲ್ಲದೇ ಹೈದ್ರಾಬಾದ್ ಕರ್ನಾಟಕ ವಿಭಾಗೀಯ ಆಯುಕ್ತ ಸುಭೋದ್ ಯಾದವ್ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.ಇತ್ತೀಚೆಗೆ ಕ್ರೀಡಾ ಸಚಿವರಾದ ರಹೀಂ ಖಾನ್ ನಗರಕ್ಕೆ ಅಗಮಿಸಿದಾಗ ಕ್ರೀಡಾಂಗಣ ಪರಿಶೀಲಿಸಿ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಆದ್ರೆ ಗುತ್ತಿಗೆದಾರರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ಇಂದಿಗೂ ಸಾಧ್ಯವಾಗಿಲ್ಲ.