ರಾಯಚೂರು: ಬಿ.ಎ ಅಂತಿಮ ವರ್ಷದ ಶಿಕ್ಷಣ ವಿಷಯದ ಪ್ರಶ್ನೆ ಪತ್ರಿಕೆ ಅದಲು ಬದಲಾಗಿ ಬಂದಿದ್ದು ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯ ಲಿಂಗಸುಗೂರು ಒಲಬಳ್ಳಾರಿ ಚೆನ್ನಬಸವೇಶ್ವರ, ಎಸ್ಎಂಎಲಬಿ ಪದವಿ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಹಿಸ್ಟಾರಿಕಲ್ ಡೆವಲಪ್‌ಮೆಂಟ್ ಆಫ್ ಎಜ್ಯೂಕೇಷನ್ ವಿಷಯದ ಬದಲು ಮೆಶರ್ಮೆಂಟ್ ಆ್ಯಂಡ್ ಇವ್ಯಾಲ್ವೇಷನ್ ಪ್ರಶ್ನೆ ಪತ್ರಿಕೆ ಬಂದಿದೆ. ಹೀಗಾಗಿ, ಪರೀಕ್ಷಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಬೇಕಿತ್ತು. ಆದ್ರೆ 11 ಗಂಟೆ ಆದ್ರೂ ಮುಂದೇನು? ಎಂಬ ಚಿಂತೆ ವಿದ್ಯಾರ್ಥಿ ಮತ್ತು ಉಪನ್ಯಾಸಕರಲ್ಲಿತ್ತು.
ವಿಶ್ವವಿದ್ಯಾಲಯದ ಯಾವೊಬ್ಬ ಅಧಿಕಾರಿಯೂ ಮೊಬೈಲ್ ಸ್ವೀಕರಿಸದೆ ಹೋಗಿದ್ದು ಪ್ರಚಾರ್ಯರನ್ನು ಮತ್ತಷ್ಟು ಗೊಂದಲದಲ್ಲಿ ಸಿಲುಕಿಸಿದೆ. "ಪ್ರಸಕ್ತ ವರ್ಷ ಕೋವಿಡ್ ನೆಪದಲ್ಲಿ ಮೂರು ಬಾರಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ನಾಲ್ಕನೇ ಬಾರಿ ಪರೀಕ್ಷೆ ಬರೆಯುತ್ತಿದ್ದೇವೆ. ಈಗ ನಾವು ಆಯ್ಕೆ ಮಾಡಿದ ಐಚ್ಛಿಕ ವಿಷಯದ ಬದಲು ಬೇರೆ ವಿಷಯದ ಪ್ರಶ್ನೆ ಪತ್ರಿಕೆ ಬಂದಿದ್ದನ್ನು ನೋಡಿದರೆ ವಿಶ್ವವಿದ್ಯಾಲಯ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ಇಂತಹ ಬೆಳವಣಿಗೆಯು ವಿವಿ ಬಗ್ಗೆ ನಿರುತ್ಸಾಹ ಮೂಡುವಂತೆ ಮಾಡಿದೆ" ಎಂದು ವಿದ್ಯಾರ್ಥಿನಿ ಬಸಮ್ಮ ಆಕ್ರೋಶ ವ್ಯಕ್ತಪಡಿಸಿದರು.