ಲಿಂಗಸುಗೂರು(ರಾಯಚೂರು): ಉದ್ಯೋಗಖಾತ್ರಿ ಯೋಜನೆಯಲ್ಲಿ ಕೂಲಿಕಾರರ ಜಾಬ್ ಕಾರ್ಡ್ನಲ್ಲಿ ಗೋಲ್ಮಾಲ್ ನಡೆದಿದೆ. ಕೆಲಸಕ್ಕೆ ಹೋದ ಕೂಲಿಕಾರರ ಬದಲು ಬೇರೆಯವರ ಖಾತೆಗೆ ಜಮೆ ಆಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಯುವಜನ ರಂಗ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲೆಯ ಲಿಂಗಸುಗೂರು ತಾಲೂಕು ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಕೂಲಿಕಾರ ಕುಟುಂಬಗಳಿಗೆ ಜಾಬ್ ಕಾರ್ಡ್ ನೀಡಿಲ್ಲ. ಕೆಲ ಕುಟುಂಬದವರಿಗೆ ನೀಡಿದ್ದು ಕೂಲಿ ಹಣ ಪಾವತಿ ಆಗದೆ ಭಾರೀ ಗೋಲ್ಮಾಲ್ ನಡೆದಿದೆ ಎಂದು ಕೂಲಿಕಾರರು ದೂರಿದರು.
ಕೂಲಿ ಕೆಲಸ ಮಾಡಿದವರಿಗೆ ಬಾಕಿ ಹಣ ನೀಡಲು ಸಾಕಷ್ಟು ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಮಸ್ಯೆ ಗಮನಕ್ಕೆ ತಂದರೆ ಕೆಲವೇ ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದರು. ಈಗ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿ ಮಾಡಲು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅರ್ಜಿ ಸಲ್ಲಿಸಿದ ಎಲ್ಲರಿಗೂ ಜಾಬ್ ಕಾರ್ಡ್ ನೀಡಬೇಕು. ಜಾಬ್ ಕಾರ್ಡ್ ಹೊಂದಿದ ಕೂಲಿಕಾರರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.