ರಾಯಚೂರು: ಜೆಸ್ಕಾಂ ರಾಯಚೂರು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರರ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ನಗರದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜೆಸ್ಕಾಂ ಅಭಿಯಂತರರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಜೆಸ್ಕಾಂ ರಾಯಚೂರು ವಿಭಾಗದಲ್ಲಿ ಸುಮಾರು 20 ವರ್ಷಗಳಿಂದ ನೂರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಕನಿಷ್ಠ ಸೌಲಭ್ಯ ಹಾಗೂ ಸೇವಾ ಭದ್ರತೆ ಇಲ್ಲದೆ ಅಪಾಯಕಾರಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೋವಿಡ್ ಲಾಕ್ಡೌನ್ ಸಮಯದಲ್ಲಿಯೂ ಗುತ್ತಿಗೆ ಕಾರ್ಮಿಕರು ಸತತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದರು, ಕಳೆದ ನಾಲ್ಕು ತಿಂಗಳಿನಿಂದ ಇವರಿಗೆ ವೇತನ ನೀಡಿಲ್ಲ ಕೂಡಲೇ ಬಾಕಿ ವೇತನ ನೀಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಪದೋನ್ನತಿ ಹೆಸರಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತಗೆದು ಹಾಕುವ ಪ್ರಯತ್ನ ನಡೆಸುತ್ತಿವೆ. ಅದನ್ನು ಕೈಬಿಟ್ಟು ಗುತ್ತಿಗೆ ಕಾಯ್ದೆ ಪ್ರಕಾರ ಎಲ್ಲಾ ಸೌಲಭ್ಯ ನೀಡಿ, ಇಎಸ್ಐ, ಪಿಇಎಫ್ ನೀಡಬೇಕು ಎಂದು ಆಗ್ರಹಿಸಿದರು.