ರಾಯಚೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಕಾನೂನು ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಬೇಕು. ವಿದ್ಯಾರ್ಥಿ ವಿರೋಧಿ ನೀತಿ ಕೈಬಿಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟಿಸಿದ ಸಮಿತಿ ಸದಸ್ಯರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪ್ರಾರಂಭದಿಂದಲೂ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬರುತ್ತಿದೆ. ಎಲ್ಲಾ ವಿಚಾರದಲ್ಲೂ ಈ ನೀತಿಯನ್ನು ಜಾರಿ ಮಾಡಲು ವಿಶ್ವವಿದ್ಯಾಲಯ ಮುಂದಾಗಿರುವುದು ಖಂಡನೀಯ. ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ತನ್ನ ದಮನಕಾರಿ ನೀತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಕೂಡಲೇ ಅದನ್ನು ಕೈಬಿಟ್ಟು ವಿದ್ಯಾರ್ಥಿಗಳ ಹಿತ ಕಾಪಾಡಲು ಮುಂದಾಗಬೇಕೆಂದು ಮನವಿ ಮಾಡಿದರು.
ಎಲ್ಲಾ ಹಂತದ ಪರೀಕ್ಷೆಗಳನ್ನು ರದ್ದು ಮಾಡಿ ಮುಂದಿನ ತರಗತಿಗೆ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಬೇಕು. ಪರೀಕ್ಷಾ ಶುಲ್ಕ ಆದೇಶವನ್ನು ಈ ಕೂಡಲೇ ವಾಪಸ್ ಪಡೆದು, ಕಟ್ಟಿರುವ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಬಳಿಕ ಉಪ ಕುಲಪತಿಗಳಿಗೆ ಜಿಲ್ಲಾಧಿಕಾರಿ ಕಾರ್ಯಾಲಯದ ಸ್ಥಾನಿಕ ಅಧಿಕಾರಿಯ ಮೂಲಕ ಎಸ್ಎಫ್ಐ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಉಪಾಧ್ಯಕ್ಷ ಬಸವರಾಜ ದೀನಸಮುದ್ರ, ಸಹ ಕಾರ್ಯದರ್ಶಿ ಚಿದಾನಂದ ಕರಿಗೂಳಿ, ಜಿಲ್ಲಾ ಮುಖಂಡರಾದ ಪ್ರವೀಣ್ ಕುಮಾರ, ಮೌನೇಶ ಬುಳ್ಳಾಪುರ, ಅಮರೇಗೌಡ, ಬಸವಂತ, ಕಾನೂನು ವಿದ್ಯಾರ್ಥಿಗಳಾದ ಶೋಯಬ್, ಮಲ್ಲರೆಡ್ಡಿ, ಗಂಗಾಧರ, ಆಶೀಫ್ ಯಾದಗಿರಿ, ಅಕ್ತರ್, ಆನಂದ ಕಂದಗಲ್, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.