ರಾಯಚೂರು: ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯೊಳಗೆ ಬರುವ ಎ,ಬಿ, ಸಿ ಹಾಗೂ ಪ್ರವರ್ಗ-1ರ 1287 ದೇವಾಲಯಗಳನ್ನ ಪುನಃ ತೆರೆಯಲಿವೆ. ಅಲ್ಲದೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿ, ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ದೇವಸೂಗೂರಿನ ಪ್ರಸಿದ್ಧ ಶ್ರೀ ಸೂಗೂರೇಶ್ವರ ದೇವಾಲಯದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಜೊತೆಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಹಾಗೆಯೇ ಸರ್ಕಾರದ ಮಾರ್ಗಸೂಚಿಯನ್ವಯ ದೇವಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗುರುತುಗಳನ್ನು ಹಾಕಲಾಗಿದೆ.
ದೇವಾಲಯದಲ್ಲಿ ಯಾವುದೇ ಉತ್ಸವ, ಸೇವೆಗಳಿಗೆ ಅವಕಾಶ ಕಲ್ಪಿಸಿಲ್ಲ. ಅಲ್ಲದೇ 10 ವರ್ಷದೊಳಗಿನ ಮಕ್ಕಳು, 65 ವರ್ಷದ ವೃದ್ಧರು, ಗರ್ಭಿಣಿಯರು, ಆದಷ್ಟು ಮನೆಯಲ್ಲಿ ಇದ್ದು ಸಹಕರಿಸುವಂತೆ ಕೋರಲಾಗಿದೆ. ಅಸ್ವಸ್ಥವಾದವರಿಗೆ ಪ್ರವೇಶವನ್ನ ನಿಷೇಧಿಸಲಾಗಿದೆ.
ಅಲ್ಲದೇ ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸ್ಯಾನಿಟೈಸರ್ ಉಪಯೋಗಿಸಬೇಕಿದೆ. ಜೊತೆಗೆ ದೇವಾಲಯದಲ್ಲಿನ ಪುಸ್ತಕ, ಗೋಡೆ, ಕಂಬ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥವನ್ನು ಮುಟ್ಟದಂತೆ ಸೂಚನೆ ನೀಡಿದ್ದು, ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.