ಲಿಂಗಸುಗೂರು: ಅತಿಯಾದ ತೇವಾಂಶ, ಬ್ಯಾಕ್ಟೇರಿಯಲ್ ರೋಗದಿಂದ ಕೋಟ್ಯಂತರ ರೂ. ಮೌಲ್ಯದ ದಾಳಿಂಬೆ ಬೆಳೆ ನಷ್ಟವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ತಾಲೂಕಿನಾದ್ಯಂತ 2500 ಹೆಕ್ಟೇರ್ ಪ್ರದೇಶದಲ್ಲಿ 750ಕ್ಕೂ ಹೆಚ್ಚು ರೈತರು ದಾಳಿಂಬೆ ನಾಟಿ ಮಾಡಿದ್ದು, ಅತಿ ಹೆಚ್ಚು ಆದಾಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಂತರ ಮಳೆ ಶಾಪವಾಗಿ ಪರಿಣಮಿಸಿದೆ. ವಾಣಿಜ್ಯ ಬೆಳೆಗಳಿಂದ ಆರ್ಥಿಕವಾಗಿ ಸಬಲೀಕರಣದ ಕನಸು ಕಂಡಿದ್ದ ರೈತ ಸಾಲಬಾಧೆಯಿಂದ ನರಳುವಂತೆ ಆಗಿದೆ.
ಲಿಂಗಸುಗೂರು ತಾಲೂಕಿನ ಕಡದರಗಡ್ಡಿ, ಯರಗೋಡಿ, ಶೀಲಹಳ್ಳಿ, ಗುಂತಗೋಳ, ಗೋನವಾಟ್ಲ, ಕಾಳಾಪುರ, ಈಚನಾಳ, ನೀರಲಕೇರಿ, ಕರಡಕಲ್ಲ, ಆನ್ವರಿ, ಗೌಡೂರು ಕಸಬಾಲಿಂಗಸುಗೂರು ಸೇರಿದಂತೆ ಗ್ರಾಮೀಣ ರೈತರು ಬೆಳೆದ ದಾಳಿಂಬೆ ದುಂಡಾಣುರೋಗ, ಕಾಯಿಕೊರಕ ರೋಗಕ್ಕೆ ತುತ್ತಾಗಿದೆ. ಕೃಷಿ ವಿಜ್ಞಾನಿಗಳ ಸಲಹೆಯಂತೆ ಕ್ರಿಮಿನಾಶಕ ಬಳಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ತೇವಾಂಶ ಪ್ರಮಾಣ ಹೆಚ್ಚಾಗಿದ್ದರಿಂದ ಬ್ಯಾಕ್ಟೇರಿಯಲ್ ವಿಲ್ಟ್, ಸಿಜೇರಿಯಮ್ ವಿಲ್ಟ್ ಹಾಗೂ ವೈರಸ್ನಿಂದ ಸಾಂಕ್ರಾಮಿಕ ರೋಗವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಕಾಪು ಕತ್ತರಿಸಿ, ಗಿಡಗಳು ಒಣಗುತ್ತಿರುವುದು ರೈತರನ್ನು ಕಂಗೆಡಿಸಿದೆ.
ಮಳೆಗಾಲ ಮತ್ತು ಬೇಸಿಗೆ ಹವಾಮಾನ ವೈಪರೀತ್ಯಕ್ಕೆ ದುಂಡಾಣು ರೋಗ ಸೇರಿದಂತೆ ಬ್ಯಾಕ್ಟೇರಿಯಲ್ ಡಿಸೀಜ್, ಬ್ಲೈಟ್ನಂತಹ ಲಕ್ಷಣಗಳು ಕಾಣಿಸಿಕೊಂಡಿದೆ. ಇಂತಹ ರೋಗದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಲು ಯೋಜನೆಗಳಲ್ಲಿ ಅವಕಾಶವಿಲ್ಲ. ತಾಂತ್ರಿಕ ಸಲಹೆಗಳನ್ನು ಮಾತ್ರ ನೀಡಬಹುದು. ಇದನ್ನು ವಿಶೇಷ ಪ್ರಕರಣ ಎಂದು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯೋಗೇಶ್ವರ ಈಟಿವಿ ಭಾರತಗೆ ಸ್ಪಷ್ಟನೆ ನೀಡಿದ್ದಾರೆ.