ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಭೀರಪ್ಪ ಸಾಬಣ್ಣ (55) ಎಂದು ಗುರುತಿಸಲಾಗಿದೆ.
ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಗುಡುಗು-ಮಿಂಚಿನೊಂದಿಗೆ ಅಲ್ಲಿಲ್ಲ ಮಳೆಯಾಗಿದ್ದು, ಇದೇ ವೇಳೆ ಕುರಿದೊಡ್ಡಿಯಲ್ಲಿ ಮಲಗಿದ್ದ ವ್ಯಕ್ತಿಗೆ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಪೊಲೀಸರು ಮೃತಪಟ್ಟ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಎತ್ತಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಎತ್ತು ಮೃತಪಟ್ಟಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕುಡಿಯುವ ನೀರಿಗಾಗಿ ಪರದಾಟ: ಮತ್ತೊಂದೆಡೆ ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲದೋರಿದೆ. ಗ್ರಾಮಸ್ಥರು ನೂರಾರು ಅಡಿಯ ಓವರ್ ಹೆಡ್ ಟ್ಯಾಂಕ್ ಮೇಲೆ ಏರಿ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಜಿಲ್ಲೆಯ ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಲು ಮೇಲ್ತೊಟ್ಟಿಯನ್ನು (ಓವರ್ ಹೆಡ್ ಟ್ಯಾಂಕ್) ನಿರ್ಮಾಣ ಮಾಡಲಾಗಿದ್ದು, ಇದರಿಂದ ಇಡೀ ಗ್ರಾಮಕ್ಕೆ ನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ದಾಹ ನೀಗಿಸಿಕೊಳ್ಳಲು ಗ್ರಾಮಸ್ಥರು ಜೀವ ಭಯವನ್ನು ಲೆಕ್ಕಿಸದೆ ಅಂದಾಜು 100 ಅಡಿ ಎತ್ತರವಿರುವ ಓವರ್ ಹೆಡ್ ಟ್ಯಾಂಕ್ ಮೇಲೆ ಬಿಂದಿಗೆ ತೆಗೆದುಕೊಂಡು, ಅಲ್ಲಿಂದ ನೀರನ್ನು ತುಂಬಿಸಿಕೊಂಡು ಬರುತ್ತಿದ್ದಾರೆ.
ಓವರ್ ಹೆಡ್ ಟ್ಯಾಂಕ್ನಲ್ಲಿ ನೀರನ್ನು ಸಂಗ್ರಹಿಸಿ ಗ್ರಾಮಕ್ಕೆ ಪೂರೈಸಲಾಗುತ್ತದೆ. ಆದರೆ ಸರಿಯಾಗಿ ಟ್ಯಾಂಕ್ಗೆ ನೀರು ಸರಬರಾಜು ಆಗದೆ ಇರುವುದರಿಂದ ಜನರು ಬಿಂದಿಗೆ ತೆಗೆದುಕೊಂಡು ಹೋಗಿ ನೀರನ್ನು ಕೊಂಡುಯ್ಯುತ್ತಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಈ ಘಟನೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಕುರೇರ ದೂರವಾಣಿ ಸಂಪರ್ಕಿಸಿದಾಗ, ಓವರ್ ಹೆಡ್ ಟ್ಯಾಂಕ್ಗೆ ನೀರನ್ನು ಸರಬರಾಜು ಮಾಡುವ ವಾಟರ್ ಮ್ಯಾನ್ ಸಮಸ್ಯೆಯಿಂದಾಗಿ ಗ್ರಾಮಸ್ಥರಿಗೆ ನೀರು ಪೂರೈಕೆಯಾಗಿರಲಿಲ್ಲ. ಈ ವಿಚಾರ ಗಮನಕ್ಕೆ ಬಂದ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಿ ಎಂದಿನಂತೆ ಈಗ ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಭಾನುವಾರದಂದು ರಾಜ್ಯದ ವಿವಿಧೆಡೆ ಭಾರೀ ಮಳೆ ಸುರಿದಿದ್ದು, ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಅಷ್ಟೇ ಅಲ್ಲದೇ, ಚಿಕ್ಕಮಗಳೂರು, ಕೊಪ್ಪಳ, ಮೈಸೂರು, ಬಳ್ಳಾರಿ ಮತ್ತು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸಾವು ನೋವು ಸಂಭವಿಸಿವೆ.
ಇದನ್ನೂ ಓದಿ: ಕೆಆರ್ಎಸ್ ನೀರಿನ ಮಟ್ಟ ಕುಸಿತ : ಒಂದು ವಾರ ಮಾತ್ರ ಬೆಳೆಗಳಿಗೆ ನೀರು