ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಸಂತ್ರಸ್ತ ಕುಟುಂಬಸ್ಥರು ತಾಲೂಕು ಆಡಳಿತದ ಭರವಸೆಗಳಿಗೆ ಬೇಸತ್ತು ಹೋಗಿದ್ದಾರೆ.
ಕಳೆದ 25 ವರ್ಷಗಳಿಂದ ನಡುಗಡ್ಡೆ ಪ್ರದೇಶಗಳಿಂದ ಪ್ರವಾಹ ಸಂದರ್ಭದಲ್ಲಿ ಈಚೆ ದಡಕ್ಕೆ ಕರೆತರಲು ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಆದರೆ ಶಾಶ್ವತ ಸ್ಥಳಾಂತರ ಮರಿಚಿಕೆಯಾಗಿದೆ.ಶಾಶ್ವತವಾಗಿ ಸ್ಥಳಾಂತರ ಮಾಡಿ ಗಂಜಿ ಊಟಕ್ಕೆ ಒಕ್ಕಲೆಬ್ಬಿಸಿ ಬದುಕು ಹಾಳುಮಾಡಬೇಡಿ ಅಂತ ಸಂತ್ರಸ್ತರು ಅಲವತ್ತುಕೊಂಡರು ಸಹ ಅಧಿಕಾರಿ ವರ್ಗ ಬಿಡುತ್ತಿಲ್ಲ. ಪ್ರವಾಹ ಸಂದರ್ಭದಲ್ಲಿ ಅಗತ್ಯ ವಸ್ತು ಪೂರೈಸಿದರೆ ಸಾಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ನಿನ್ನೆ ಸಂಜೆ ಏಕಾ ಏಕಿ ನಾರಾಯಣಪುರ ಅಣೆಕಟ್ಟೆಯಿಂದ ನೀರು ಕೃಷ್ಣಾ ನದಿಗೆ ಹರಿ ಬಿಟ್ಟಿದ್ದರಿಂದ ಕರಕಲಗಡ್ಡಿ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.ತಾಲೂಕು ಆಡಳಿತ ಯಾವುದೇ ಮುನ್ಸೂಚನೆ ನೀಡದೆ ಹೋಗಿದ್ದರಿಂದ ಕರಕಲಗಡ್ಡಿ ಪ್ರದೇಶದ ಜನತೆಗೆ ಪಡಿತರ ನೀಡಿ ಅಲ್ಲಿದ್ದ 4 ತಿಂಗಳ ಮಗು, ಬಾಣಂತಿಯನ್ನು ತೆಪ್ಪದ ಮೂಲಕ ಯಳಗುಂದಿಗೆ ಕರೆತರಲಾಯಿತು.