ಲಿಂಗಸುಗೂರು(ರಾಯಚೂರು) : ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯಲು ಸಂತಾನಹರಣ ಶಸ್ತ್ರ ಚಿಕಿತ್ಸೆ ಕ್ಯಾಂಪ್‌ನ ರದ್ದುಪಡಿಸಲಾಗಿದೆ. ಆದರೆ, ಕೆಲ ವೈದ್ಯರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಧ್ಯರಾತ್ರಿಯಿಂದ ಬೆಳಗಿನ ಜಾವದೊಳಗಡೆ ನಿತ್ಯ 50 ರಿಂದ 60 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಕೆಲ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು ಶ್ಯಾಮೀಲಾಗಿ ಒಬ್ಬರಿಂದ ಎರಡರಿಂದ ಮೂರು ಸಾವಿರ ಹಣ ಪಡೆಯುತ್ತಿರುವ ಬಗ್ಗೆ ಸ್ವತಃ ಆಪರೇಷನ್ ಮಾಡಿಸಿಕೊಂಡವರೆ ದೂರಿದ್ದಾರೆ.
ಪ್ರತಿ ನಿತ್ಯ ಸೂರ್ಯೋದಯಕ್ಕೆ ಮುಂಚೆ, ಸರ್ಕಾರಿ ಆಸ್ಪತ್ರೆಯ ಕೋವಿಡ್-19 ಪರೀಕ್ಷೆಗೆ ಗಂಟಲು ದ್ರವ ಸಂಗ್ರಹ ಮಾಡುವ ವಾರ್ಡ್ ಹಾಗೂ ಐಸೋಲೇಷನ್ ವಾರ್ಡ್ ಬಳಿ ಮಹಿಳೆಯರು ಮಕ್ಕಳ ಸಮೇತ ಬಿಡಾರ ಹೂಡಿರುತ್ತಾರೆ.
ಸರ್ಕಾರವು ವಾಹನ ವ್ಯವಸ್ಥೆ ಮಾಡಿಕೊಟ್ಟು, ವೈದ್ಯಕೀಯ ಖರ್ಚು ವೆಚ್ಚ ಭರಿಸುವ ಈ ಯೋಜನೆಯಡಿ ಸೌಲಭ್ಯ ಪಡೆಯುವ ಸಾಮಾನ್ಯ ಜನತೆ ಪರದಾಡುವಂತಾಗಿದೆ. ಇನ್ನೊಂದೆಡೆ ಐಸೋಲೇಷನ್ ವಾರ್ಡ್ನಲ್ಲಿ ತಿರುಗಾಟ ಮಾಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸದೇ ಹೋಗಿದ್ದು ವಿಪರ್ಯಾಸ.
ಈ ಕುರಿತು ಹೆಸರು ಹೇಳಲಿಚ್ಚಿಸದ ಆಶಾ ಕಾರ್ಯಕರ್ತೆಯೊಬ್ಬರು ಮಾತನಾಡಿ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕ್ಯಾಂಪ್ ಬಂದ್ ಆಗಿವೆ. ಹಣ ನೀಡುವವರನ್ನು ಕರೆ ತಂದರೆ ಮಾಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ಹಣ ಪಡೆದು ಬೆಳಗಿನ ಜಾವ ಆಪರೇಷನ್ ಮಾಡಿದಾಕ್ಷಣ ಆಸ್ಪತ್ರೆಯಲ್ಲಿ ಇರಬಾರದು ಎಂದು ತಕ್ಷಣವೇ ಕಳುಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.