ರಾಯಚೂರು: ರಾಜ್ಯ ರಾಜಕೀಯದಲ್ಲಿ 'ಆಪರೇಷನ್ ಕಮಲ' ಪರ್ವ ರಾಯಚೂರು ಜಿಲ್ಲೆಯಿಂದ ಶುರುವಾಗಿದೆ. ಅಂದಿನಿಂದ ಇಂದಿನಿಂದನವರೆಗೆ ಇಲ್ಲಿನ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿ ಖ್ಯಾತಿ, ಅಪಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಶುರುವಾದ ಆಪರೇಷನ್ ಕಮಲ ಪ್ರಹಸನ ರಾಯಚೂರು ಜಿಲ್ಲೆಯಿಂದ ಶುರುವಾಗಿದೆ. ಒಂದು ರೀತಿಯಲ್ಲಿ ಈ ರೀತಿಯ ಪಕ್ಷಾಂತರ ಪರ್ವದ ಜೊತೆಗೆ ಜಿಲ್ಲೆಯ ರಾಜಕೀಯ ನಾಯಕರಿಗೆ ಅವಿನಾಭಾವ ಸಂಬಂಧ ಇದೆ ಎಂದರೆ ತಪ್ಪಾಗಲಾರದು. 2008ರಲ್ಲಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ ಅಪರೇಷನ್ ಕಮಲಕ್ಕೆ ದೇವದುರ್ಗ ಕ್ಷೇತ್ರದಿಂದ ಮೊದಲ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ ಕೆ.ಶಿವನಗೌಡ ನಾಯಕ ಒಳಗಾಗಿದ್ದರು. ಇವರು ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿ ಕೆಲವೇ ದಿನಗಳಲ್ಲಿ ಬಿಜೆಪಿ ಸೇರಿದ್ದರು. ಬಳಿಕ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿ ಮಂತ್ರಿಯಾದರು.
ಅಲ್ಲಿಂದ ಶುರುವಾದ ಪಕ್ಷಾಂತರ ಪರ್ವ ಜಿಲ್ಲೆಯ ಜೊತೆ ಸಾಮೀಪ್ಯ ಬೆಳೆಸಿಕೊಂಡಿದೆ. ಅದಾದ ನಂತರ 2018ರ ಸಾರ್ವತ್ರಿಕ ಚುನಾವಣೆ ಮುನ್ನವೇ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯಲ್ಲಿ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದ ಡಾ.ಶಿವರಾಜ್ ಪಾಟೀಲ್ ಹಾಗು ಮಾನಪ್ಪ ವಜ್ಜಲ್ ಅವಧಿಗೆ ಮೊದಲೇ ಶಾಸಕ ಸ್ಥಾನಕ್ಕೆ ರಿಸೈನ್ ಮಾಡಿ ಬಿಜೆಪಿಗೆ ಸೇರಿದ್ರು. ಆಗ ಜಿಲ್ಲೆ ಎರಡನೇ ಬಾರಿಗೆ ಅಪರೇಷನ್ ಕಮಲಕ್ಕೆ ಸಾಕ್ಷಿಯಾಯಿತು.
ಇದೀಗ ಮೈತ್ರಿ ಸರಕಾರದಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು, ಅಪರೇಷನ್ ಕಮಲದ ಸುಳಿಗೆ ಶಾಸಕರು ಸಿಲುಕಿದ್ದಾರೆ. ಈ ಅತೃಪ್ತರಲ್ಲಿ ಮಸ್ಕಿ ಕಾಂಗ್ರೆಸ್ನ ಶಾಸಕ ಪ್ರತಾಪ ಗೌಡ ಆಪರೇಷನ್ ಕಮಲದ ಸುಳಿಗೆ ಸಿಲುಕಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಮತ್ತೆ ಬೈ ಎಲೆಕ್ಷನ್ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹವರಿಗೆ ಜನರು ತಕ್ಕ ಉತ್ತರ ನೀಡಬೇಕು ಎನ್ನುವುದು ಪ್ರಜ್ಞಾವಂತ ಮತದಾರರ ಒತ್ತಾಯವಾಗಿದೆ.