ರಾಯಚೂರು: ಆನ್ಲೈನ್ ಮೂಲಕ ಬ್ಯಾಂಕ್ನ ಯುಪಿಐ ಐಡಿ ಬಳಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಯಚೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಸಿದ್ದಲಿಂಗಯ್ಯನ ಪಾಳ್ಯದ ಊರ್ಡಿಗೆರೆ ಹೋಬಳಿಯ ಬ್ಯಾತಾ ಗ್ರಾಮದ ಕಿರಣಕುಮಾರ ಹಾಗೂ ಹನುಮಂತರಾಜ ಬಂಧಿತ ಆರೋಪಿಗಳು. ಜಿಲ್ಲೆಯ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮ ರೈತ ಭೀಮಣ್ಣ ರೋಡಲಬಂಡಿ ಎಂಬುವವರು ಜಾಲಹಳ್ಳಿ ಗ್ರಾಮದಲ್ಲಿನ ಎಸ್ಬಿಐ ಬ್ಯಾಂಕ್ನಲ್ಲಿ 2,22,879 ರೂ.ಗಳನ್ನು ಸೇವಿಂಗ್ ಖಾತೆಯಲ್ಲಿ ಇರಿಸಿದ್ರು. ಆರೋಪಿಗಳು ಆನ್ಲೈನ್ ಯುಪಿಐ ಐಡಿ ಮೂಲಕ ಜ.30ರಿಂದ ಫೆ.4ರ ಮಧ್ಯ ದಿನಗಳಲ್ಲಿ ಹಣವನ್ನ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಖಾತೆಯಲ್ಲಿ ಹಣ ಇಲ್ಲದ್ದನ್ನು ಕಂಡು ರೈತ ಭೀಮಣ್ಣ ಫೆ.6ರಂದು ಸೈಬರ್ ವಿಭಾಗಕ್ಕೆ ದೂರು ನೀಡಿದ್ದರು.
ದೂರಿನ ಆಧಾರ ಮೇಲೆ ಪ್ರಕರಣವನ್ನ ಬೆನ್ನತ್ತಿದ ಪೊಲೀಸರು, ಆರೋಪಿಗಳನ್ನ ತುಮಕೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಅವರ ಖಾತೆಯಲ್ಲಿದ್ದ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ. ಭೀಮಣ್ಣ ಬ್ಯಾಂಕ್ ಖಾತೆ ನೀಡಲಾಗಿದ್ದ ಮೊಬೈಲ್ ನಂಬರ್ ಕಳೆದುಕೊಂಡಿದ್ದ. ಇದೇ ಸೀಮ್ ಬಂಧಿತ ಆರೋಪಿಗಳ ಮತ್ತೊಮ್ಮೆ ಮರುಬಳಕೆ ಮಾಡಿಕೊಂಡು, ಯುಪಿಐ ಐಡಿಯಿಂದ ಹಣವನ್ನ ವರ್ಗಾವಣೆ ಮಾಡಿಕೊಂಡು ಹಣವನ್ನ ದೋಚಿದ್ರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.