ರಾಯಚೂರು : ನಗರದ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಜಿಲ್ಲಾಡಳಿತ ಕಟ್ಟಡ ಸ್ಥಳದ ಕುರಿತು ಜನಪ್ರತಿನಿಧಿಗಳಲ್ಲಿನ ಗೊಂದಲದಿಂದ ನೂತನ ಕಚೇರಿ ನಿರ್ಮಾಣ ನೆನೆಗುದಿಗೆ ಬಿದ್ದಿದೆ.
ಯಡಿಯೂರಪ್ಪ ನೇತೃತ್ವದ ಈ ಹಿಂದಿನ ಬಿಜೆಪಿ ಸರ್ಕಾರ ರಾಯಚೂರು ಜಿಲ್ಲಾಡಳಿತ ಕಚೇರಿ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನ ನೀಡಿತ್ತು. ಆಗ ಸ್ಥಳ ಖಚಿತಪಡಿಸಿರಲಿಲ್ಲ. ಅನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಗರದ ಹೊರವಲಯದ ಯಕ್ಲಾಸಪುರ ಬಳಿ ಜಮೀನು ಗುರುತಿಸಲಾಗಿತ್ತು.
ಜಿಲ್ಲಾಡಳಿತ ಸ್ಥಳ ಗುರುತಿಸಿದ ಬಳಿಕ 11 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ಅದರಂತೆ ಕಳೆದ ಮೂರು ವರ್ಷಗಳ ಹಿಂದೆ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು. ಪ್ರಸ್ತುತ ಗುತ್ತಿಗೆದಾರರಿಗೆ ಸಂದಾಯವಾಗಬೇಕಾದ ಹಣ ಪಾವತಿಯಾಗದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಿದ್ದು, ಕಟ್ಟಡದ ಸುತ್ತಲೂ ಗಿಡಗಳು ಬೆಳೆದಿರುವುದರಿಂದ ಹಾಳು ಕೊಂಪೆಯಾಗುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರ ನಡುವಿನ ಗೊಂದಲಕ್ಕೆ ಜಿಲ್ಲಾಧಿಕಾರಿ ನೂತನ ಕಚೇರಿ ಕಟ್ಟಡ ನಿರ್ಮಾಣ ನೆನೆಗುದಿಗೆ ಬಿದ್ದಿದೆ.