ರಾಯಚೂರು : ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಬುರಗಿ ಗುತ್ತಿ ರಾಷ್ಟ್ರೀಯ ಹೆದ್ದಾರಿ 57 ಕಾಮಗಾರಿ ಭೂ ಸರ್ವೇ ಕಾರ್ಯ ಸ್ಥಳದ ಮಾಲೀಕರ ಆಕ್ಷೇಪದ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸಪೇಟೆ ವಿಭಾಗದ ಎಇಇ ಕೆ.ರಮೇಶ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಸರ್ವೇ ಕಾರ್ಯ ನಡೆಯಿತು.
ತುಟ್ಟಾಪುರ ಗ್ರಾಮದಿಂದ ನಗರದ ಆರ್‌ಟಿಒ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಾಕಿ ಇದ್ದು, ಹೆದ್ದಾರಿ ಹಾದು ಹೋಗುವ 1.72 ಕಿ.ಮೀ ರಸ್ತೆ ಹಾದು ಹೋಗುವ ಭೂ ಮಾಲೀಕ ವೆಂಕಣ್ಣ ಯಾದವ್ ಅವರು ಭೂ ಪರಿಹಾರ ಕುರಿತು ಉಚ್ಚನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಕಾಮಗಾರಿ ಬಹುದಿನಗಳಿಂದ ಸಾಗಿದ್ದು, ಕಾಮಗಾರಿಯಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಕಾಮಗಾರಿ ಪೂರ್ಣಕ್ಕೆ ಬಹುದಿನಗಳಿಂದ ಜನರ ಒತ್ತಾಯವಿದೆ. ರಾಷ್ಟ್ರೀಯ ಹೆದ್ದಾರಿ 57 ಕಾಮಗಾರಿ ಒಟ್ಟು 30.17 ಕಿ.ಮೀನಲ್ಲಿ 28.17 ಕಿ.ಮೀ ಪೂರ್ಣಗೊಂಡಿದೆ. 1.72 ಕಿ.ಮೀ ರಸ್ತೆ ಕಾಮಗಾರಿ ಬಾಕಿ ಇದ್ದು, ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಹಿನ್ನೆಲೆ ಇಂದು ಸರ್ವೇ ಕಾರ್ಯ ನಡೆದಿದೆ.
ಇನ್ನು, ಸರ್ವೇ ಕಾರ್ಯದಲ್ಲಿ ಯಾವುದೇ ರೀತಿಯ ಅಡೆತಡೆಗಳು ಆಗದಿರಲು ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.