ರಾಯಚೂರು : ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಯೋಜನೆ ಜಾರಿಗೆ ಹಲವು ವರ್ಷಗಳು ಕಳೆದಿದ್ದು, ಯೋಜನೆ ಪೂರ್ಣಗೊಂಡು ರೈಲ್ವೆ ಸಂಚಾರ ಆರಂಭವಾಗಬೇಕಾಗಿತ್ತು. ಆದರೆ ಇದುವರೆಗೆ ಯೋಜನೆ ಪೂರ್ಣಗೊಳ್ಳದೆ ಆಮೆಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯ ಮಾರ್ಗವಾಗಿ ಸಂಚರಿಸುವ ರೈಲ್ವೆ ಯೋಜನೆಗೆ ಇದುವರೆಗೂ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ.
ಕೊಪ್ಪಳ, ರಾಯಚೂರು ಹಾಗೂ ಆಂಧ್ರ ಪ್ರದೇಶದ ಮೆಹಬೂಬ್ ನಗರಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 2005-2006ನೇ ಸಾಲಿನಲ್ಲಿ ಮುನಿರಾಬಾದ್-ಮೆಹಬೂಬ್ ನಗರ ಯೋಜನೆಯನ್ನ ಜಾರಿಗೊಳಿಸಲಾಯಿತು. ಈ ಮೂಲಕ 2015-2016ವರೆಗೆ 1200 ಎಕರೆ ಭೂಸ್ವಾಧೀನ ಪಡಿಸಿಕೊಂಡು, ಕೊಪ್ಪಳ ತಾಲೂಕಿನ ಗಿಣಿಗೇರಾದಿಂದ ರಾಯಚೂರು ತಾಲೂಕಿನ ಯರಮರಸ್ ವರೆಗೆ 165 ಕಿ.ಮೀ. ರೈಲ್ವೆ ಲೈನ್ ನಿರ್ಮಿಸಬೇಕಾಗಿತ್ತು. ಗಿಣಿಗೇರಾದಿಂದ ಗಂಗಾವತಿಯವರೆ ರೈಲ್ವೆ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಿದೆ. ಆದ್ರೆ ಇದುವರೆಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನೆನೆಗುದ್ದಿಗೆ ಬಿದ್ದಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ 7 ಗ್ರಾಮಗಳಾದ ಚನ್ನಳ್ಳಿ, ಕೊಂತ್ನೂರು, ಗೋರೆಬಾಳ, ರೌವಡಕುಂದಾ, ಸಾಸಲಮರಿ, ಹೊಸ್ಸಳ್ಳಿ-ಇಜೆ ಹಾಗೂ ಸಿಂಧನೂರು ನಗರ ಗ್ರಾಮಗಳ ವಿಸ್ತೀರ್ಣ 172-12 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕು. ಅಲ್ಲದೇ ಹೆಚ್ಚುವರಿಯಾಗಿ ಸಿಂಧನೂರು ತಾಲೂಕಿನ ಕೊಂತನೂರು, ರೌವಡಕುಂದಾ, ಹೊಸಳ್ಳಿ-ಇಜೆ, ಸಾಸಲಮರಿ, ಗೋರೆಬಾಳ ಮತ್ತು ಸಿಂಧನೂರು ಹೆಚ್ಚುವರಿಯಾಗಿ 196 ಎಕರೆ ಪ್ರದೇಶವನ್ನ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಆದ್ರೆ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಭೂಮಿ ದರ ನಿಗದಿ ವಿಚಾರಕ್ಕೆ ಹಗ್ಗಾ-ಜಗಾಟ್ಟ ನಡೆದಿದ್ದು, ಹಲವು ಬಾರಿ ಸಭೆಗಳನ್ನ ಸಹ ನಡೆಸಲಾಗಿದೆ. ಆದ್ರೂ ಇನ್ನೂ ಭೂಮಿ ದರ ನಿಗದಿಗೊಳಿಸುವ ವಿಚಾರ ಮುಂದುವರೆದಿರುವುದರಿಂದ ಯೋಜನೆ ನೆನೆಗುದ್ದಿಗೆ ಬಿದ್ದಿದೆ. ರಾಯಚೂರು ತಾಲೂಕಿನ ಮಮದಾಪೂರು, ಹೊಸೂರು ಗ್ರಾಮಗಳ 63-15 ಎಕರೆ ಜಮೀನು ಭೂ ಪರಿಹಾರ ಪಾವತಿಸಿ, ರೈಲ್ವೆ ಇಲಾಖೆ ಭೂಮಿಯನ್ನ ಹಸ್ತಾಂತರಿಸಲಾಗಿದೆ. ಇನ್ನುಳಿದ ಮಾನ್ವಿ, ರಾಯಚೂರು, ಸಿಂಧನೂರು ತಾಲೂಕಿನ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುವ ಮೂಲಕ ಯೋಜನೆ ನೆನೆಗುದ್ದಿಗೆ ಬೀಳುತ್ತಿದೆ.
ಓದಿ : ಛಲಬೇಕು ಸಾಧಕನಿಗೆ.. ಕಾಲಿನಿಂದ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ದಿವ್ಯಾಂಗ..
ಈ ಯೋಜನೆ ಸರ್ಕಾರ ಅಗತ್ಯಕ್ಕನುಗುಣವಾಗಿ ಅನುದಾನವನ್ನ ಬಿಡುಗಡೆ ಮಾಡಬೇಕಾಗಿತ್ತು. ಆದ್ರೆ ಹಂತ ಹಂತವಾಗಿ ನೀಡುತ್ತಿರುವುದರಿಂದ ಯೋಜನೆ ವಿಳಂಬವಾದಂತೆಲ್ಲ, ವರ್ಷದಿಂದ ದರ ಸಹ ಏರಿಕೆಯಾಗುತ್ತಲೇ ಇದೆ. ಸದ್ಯ ಇದೀಗ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಆಂಧ್ರ ಹಾಗೂ ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ಅಗತ್ಯಕ್ಕೆ ಅನುಗುಣವಾಗಿ ಅನುದಾನವನ್ನ ಬಿಡುಗಡೆ ಮಾಡಿಸುವ ಮೂಲಕ ಯೋಜನೆ ಸಾಕಾರಗೊಳಿಸಬೇಕು ಎನ್ನುವುದು ಜಿಲ್ಲೆಯ ಜನತೆ ಒತ್ತಾಸೆಯಾಗಿದೆ.