ರಾಯಚೂರು: ಲಿಂಗಸುಗೂರು ತಾಲೂಕಿನಲ್ಲಿ ಬಟ್ಟೆ ವ್ಯಾಪಾರಕ್ಕೆಂದು ಬಂದಿದ್ದ ಜಾರ್ಖಂಡ್, ಉತ್ತರ ಪ್ರದೇಶದ ವಲಸಿಗರು, ಹಸಿವಿನಿಂದ ಬಳಲುತ್ತಿರುವ ನಮ್ಮನ್ನು ಸುರಕ್ಷಿತವಾಗಿ ನಮ್ಮ ಊರುಗಳಿಗೆ ಕಳುಹಿಸಿಕೊಡಿ ಎಂದು ಕಣ್ಣೀರಿಡುತ್ತಿದ್ದಾರೆ.
2019 ಡಿಸೆಂಬರ್ ತಿಂಗಳಲ್ಲಿ ವ್ಯಾಪಾರಕ್ಕೆಂದು ಬಂದಿರುವ ಜಾರ್ಖಂಡ್ ರಾಜ್ಯದ 17 ಮತ್ತು ಉತ್ತರ ಪ್ರದೇಶದ 13 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ಆರಂಭದಿಂದ ಇರುವಷ್ಟು ದುಡ್ಡು ಖರ್ಚು ಮಾಡಿದ್ದೇವೆ. ಈಗ ಚಹಾ ಕುಡಿಯಲು ಬಿಡಿಗಾಸು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಆರಂಭದಲ್ಲಿ ಪೊಲೀಸ್, ಪುರಸಭೆ, ಕಂದಾಯ ಅಧಿಕಾರಿಗಳ ತಂಡ ಖುದ್ದು ಭೇಟಿ ಮಾಡಿ 25 ಕೆಜಿ ಅಕ್ಕಿ, 4 ಕೆಜಿ ಗೋಧಿ ಹಿಟ್ಟು, 4 ಪ್ಯಾಕೆಟ್ ಮಂಡಕ್ಕಿ, 2 ಕೆಜಿ ಬೇಳೆ ನೀಡಿದ್ದರು. 17 ಜನರಿಗೆ ಸಾಕಾಗದೇ ಪುರಸಭೆಗೆ ಕೇಳಲು ಹೋದರೆ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು ಕೂಡ ನೀಡುತ್ತಿಲ್ಲ ಎಂದು ಸಾಮೂಹಿಕವಾಗಿ ಆರೋಪಿಸಿದ್ದಾರೆ.
ಒಂದೂವರೆ ತಿಂಗಳಿಂದ ಸಂಕಷ್ಟದಲ್ಲಿದ್ದೇವೆ. ಬಾಡಿಗೆ ಕಟ್ಟಲು ಹಣವಿಲ್ಲ. ವ್ಯಾಪಾರ ಆರಂಭಗೊಂಡಿದ್ದರೂ ಜನತೆ ಗ್ರಾಮಗಳಲ್ಲಿ ಬಿಟ್ಟುಕೊಳ್ಳುತ್ತಿಲ್ಲ. ಸರ್ಕಾರ ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಕೂಡ ಮಾಡುತ್ತಿಲ್ಲ. ಸರ್ಕಾರ ಪಡಿತರ ನೀಡದೇ ಹೋಗಿದ್ದರಿಂದ ಒಪ್ಪೊತ್ತಿನ ಊಟಕ್ಕೆ ಪರದಾಡುವಂತಾಗಿದೆ ಎಂದು ವಲಸಿಗ ನಿತೇಶ ಕುಮಾರಸಿಂಗ್ ಕಣ್ಣೀರಿಟ್ಟರು.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಕೆ.ಕೆ ಮುತ್ತಪ್ಪ ಅವರನ್ನು ಸಂಪರ್ಕಿಸಿದಾಗ, ವಲಸಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ಆನ್ಲೈನ್ನಲ್ಲಿ ನೋಂದಣಿ ಮಾಡಲಾಗಿದೆ. ಉಳಿದಂತೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.