ರಾಯಚೂರು: ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಮಠದ ವ್ಯವಸ್ಥಾಪಕ ವೆಂಕಟೇಶ್ ಜೋಶಿ ತಿಳಿಸಿದ್ದಾರೆ.
ಅ.2 ರಂದು ಪೀಠಾಧಿಪತಿ ಶ್ರೀಸುಬುದೇಂದ್ರ ತೀರ್ಥರಿಂದ ಮುಖ್ಯದ್ವಾರ ತೆರೆಯುವ ಮೂಲಕ ನಿನ್ನೆಯಿಂದ ರಾಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 8 ರಿಂದ 4 ಗಂಟೆಯವರೆ ಅವಕಾಶ ಕಲ್ಪಿಸಲಾಗಿದೆ. ಮಠಕ್ಕೆ ಬರುವವರಿಗೆ ಮುಖ್ಯದ್ವಾರದ ಬಳಿ ಸ್ಯಾನಿಟೈಸೇಷನ್ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಪ್ರತಿಯೊಬ್ಬ ಭಕ್ತರಿಗೆ ಡಿಜಿಟಲ್ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು, ಮಾಸ್ಕ್ ಧರಿಸಿದವರಿಗೆ ಸರತಿ ಸಾಲಿನಿಂದ ರಾಯರ ದರ್ಶನಕ್ಕೆ ಬಿಡಲಾಗುತ್ತಿದೆ. ಅಲ್ಲದೇ ದರ್ಶನಕ್ಕೆ ಬರುವವರಿಗೆ ಶ್ರೀಮಠದ ರೂಂಗಳನ್ನು ನೀಡಲಾಗುತ್ತಿದೆ. ಆನ್ಲೈನ್ ಸೇವೆಗಳು ಎಂದಿನಂತೆ ಅವಕಾಶವಿದ್ದು, ಪರಿಮಳ ಪ್ರಸಾದವನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ ಪರಿಣಾಮ ಶ್ರೀಮಠಕ್ಕೆ ಸರಿಸುಮಾರು 60 ರಿಂದ 70 ಕೋಟಿ ರೂಪಾಯಿ ಆದಾಯ ಕಡಿಮೆಯಾಗಿರಬಹುದೆಂದು ಅಂದಾಜಿಸಲಾಗಿದೆ. ಆದಾಯ ಕಡಿಮೆಯಾದರೂ, ಸಿಬ್ಬಂದಿಗಳಿಗೆ, ಅಧಿಕಾರಿಳಿಗೆ ವೇತನ ನೀಡಲಾಗಿದೆ. ರಾಯರ ಮಠ ದರ್ಶನ ಲಭ್ಯವಾಗುವ ಮಾಹಿತಿ ತಿಳಿಯುತ್ತಿದ್ದಂತೆ ಭಕ್ತರು ಶ್ರೀಮಠಕ್ಕೆ ಆಗಮಿಸುವ ಮೂಲಕ ದರ್ಶನ ಪಡೆಯುತ್ತಿದ್ದು, ಬಂದ ಭಕ್ತರಿಗೆ ಸ್ವಾಗತ ಕೊರತ್ತೇವೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.