ರಾಯಚೂರು: ಯತಿಕುಲ ತಿಲಕ, ಕಲಿಯುಗದ ಕಾಮದೇನು, ಕಲ್ಪವೃಕ್ಷ ಶ್ರೀಗುರು ರಾಘವೇಂದ್ರರ 351ನೇ ಆರಾಧನ ಮಹೋತ್ಸವದ ನಾಲ್ಕನೇ ದಿನವಾದ ಇಂದು ಮಧ್ಯಾರಾಧನೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶ್ರೀಗುರು ರಾಘವೇಂದ್ರ ಸ್ವಾಮಿಗಳು ಸಶರೀರಾಗಿ ಬೃಂದಾವನ ಪ್ರವೇಶಿಸಿದ ಪವಿತ್ರ ದಿನವಾದ ಇಂದು ಮಧ್ಯಾರಾಧನೆ ನೆರವೇರಿಸಲಾಗುತ್ತದೆ. ಬೆಳಗ್ಗೆಯಿಂದಲೇ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆ ಕೈಂಕಾರ್ಯಗಳನ್ನು ಶ್ರೀಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರು ನೆರವೇರಿಸಿದರು.
ಮಧ್ಯಾರಾಧನೆ ಹಿನ್ನೆಲೆ ತಿರುಪತಿ ತಿರುಮಲದಿಂದ ಕಳುಹಿಸಲಾದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಶ್ರೀಮಠದ ಪ್ರಾಂಗಣದಲ್ಲಿ ವಿವಿಧ ವಾದ್ಯ, ಮೇಳದೊಂದಿಗೆ ವೈಭವದಿಂದ ಬರಮಾಡಿಕೊಂಡ ಶ್ರೀಗಳು ರಾಯರ ಬೃಂದಾವನಕ್ಕೆ ಶೇಷವಸ್ತ್ರವನ್ನು ಸಮರ್ಪಿಸಿದರು.
ಬಳಿಕ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಸೇರಿದಂತೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಜರುಗಿದವು. ಮಧ್ಯಾರಾಧನೆ ನಿಮಿತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ರಾಜ್ಯ, ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತುರು ಆಗಮಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಕೃಪಿಗೆ ಪಾತ್ರರಾದರು.
ಪೂರ್ವಾರಾಧನೆಯ ದಿನವಾದ ನಿನ್ನೆ ಅಪಾರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ, ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸರತಿಸಾಲಿನಲ್ಲಿ ನಿಂತು ಶ್ರೀಗುರು ರಾಯರ ದರ್ಶನ ಪಡೆದರು. ರಾಜ್ಯಸಭೆ ಸದಸ್ಯ, ಚಿತ್ರನಟ ಜಗ್ಗೇಶ್ ಅವರು ರಾಯರ ಪವಾಡಗಳ ಬಗ್ಗೆ ಭಕ್ತರಿಗೆ ವಿವರಿಸಿದರು.
ಇದನ್ನೂ ಓದಿ: ಕುಟುಂಬ ಸಮೇತ ರಾಯರ ದರ್ಶನ ಪಡೆದ ಮಾಜಿ ಸಿಎಂ ಬಿಎಸ್ವೈ: ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ