ಲಿಂಗಸುಗೂರು: ಲಾಕ್ಡೌನ್ ಜಾರಿಯಲ್ಲಿದ್ದರೂ ಕೂಡ ತಾಲೂಕಿನ ಜನರು ಮಾತ್ರ ಮದುವೆ ಸಮಾರಂಭಗಳ ನಿಮಿತ್ತ ಬಟ್ಟೆ, ಬಂಗಾರ, ದಿನಸಿ ಖರೀದಿಗೆ ಬೀದಿಗಿಳಿದಿದ್ದು, ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಲಾಕ್ಡೌನ್ 3ನೇ ಹಂತದ ವಿಸ್ತರಣೆಯಿಂದ ರೋಸಿ ಹೋಗಿರುವ ಸಾರ್ವಜನಿಕರು, ಮದುವೆ, ಗೃಹಪ್ರವೇಶ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳತ್ತ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಪಟ್ಟಣ ಜನಜಂಗುಳಿಯಿಂದ ತುಂಬಿದ್ದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಣ್ಮರೆಯಾಗಿದ್ದು ಕಂಡು ಬಂದಿದೆ.
ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಇತರೆ ರಾಜ್ಯಗಳಿಂದ ಬಂದಿರುವ ಸಾವಿರಾರು ಜನರು ಕೂಡ ಬೀದಿಗಿಳಿದಿದ್ದಾರೆ. ಮೇಲುಸ್ತುವಾರಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು, ಸೋಂಕು ಹರಡುವ ಸಾಧ್ಯತೆಗಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.