ರಾಯಚೂರು: ಹಲವು ದಶಕಗಳಿಂದ ವಿಮಾನ ನಿಲ್ದಾಣಕ್ಕಾಗಿ ಮೀಸಲಿರಿಸಿರುವ ಭೂಮಿ ಒತ್ತುವರಿಯಾಗುತ್ತಿರುವ ಆರೋಪ ಕೇಳಿಬಂದಿದ್ದು, ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.
ರಾಯಚೂರು ಹೊರವಲಯ ಯರಮರಸ್ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎಂದು ಹಲವು ದಶಕಗಳಿಂದ ನೂರಾರು ಎಕರೆ ಜಮೀನು ಮೀಸಲು ಇರಿಸಲಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರೈತರಿಂದ ಸುಮಾರು 398 ಎಕರೆ ಪ್ರದೇಶವನ್ನು ವಿಮಾನ ನಿಲ್ದಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಮುಖ್ಯವಾಗಿ ಏಗನೂರು ಗ್ರಾಮ ವ್ಯಾಪ್ತಿಗೆ ಬರುವ 366 ಎಕರೆ ಜಮೀನು, ಯರಮರಸ್ನ ವ್ಯಾಪ್ತಿಗೆ ಬರುವ 32 ಎಕರೆ ಭೂಮಿಯಿದೆ. ಜೊತೆಗೆ ಕಟ್ಮೊನ್ಮೆಂಟ್ ಭೂಮಿ ಕೂಡಾ ಅದೂ ಒತ್ತುವರಿಯಾಗಿದೆ. ಯರಮರಸ್ ದಂಡ್ ಇದರ ವ್ಯಾಪ್ತಿಗೆ ಒಳಪಡಲಿದ್ದು, ಅಲ್ಲಿನ ಕೆಲ ನಿವಾಸಿಗಳು ಈ ಭೂಮಿಯನ್ನ ತಮ್ಮ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ.
ಸರ್ಕಾರಕ್ಕೆ ಒಳಪಡುವ ಏನಗೂರು ಪ್ರದೇಶದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ, ಇಂದಿಗೂ ವ್ಯವಸಾಯ ಮಾಡುತ್ತಿದ್ದಾರೆ. ಗೈರಾಣಿ ಜಮೀನು ಎಂದು ಕೆಲವರು ಉಳುಮೆ ಮಾಡಿದರೆ, ಪಿತ್ರಾರ್ಜಿತ ಆಸ್ತಿ ಎಂದು ಇನ್ನೂ ಕೆಲವರು ಕೃಷಿ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಭೂಮಿ ಅಗೆಯಲಾಗಿದ್ದು, ಇದರಿಂದ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿವೆ. ಮುಂದೆ ಈ ಗುಂಡಿಗಳನ್ನು ಮುಚ್ಚಬೇಕಾದರೂ ಸರ್ಕಾರ ಹಣ ವ್ಯಯಿಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಒತ್ತುವರಿ ತೆರವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇತ್ತೀಚೆಗೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾಲ ಕೂಡಿ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜಿಲ್ಲಾಧಿಕಾರಿ ಹಾಗೂ ಕೆಎಸ್ಎಸ್ಐಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿರ್ಮಾಣ ಕುರಿತು ಚರ್ಚೆ ನಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಸರ್ಕಾರ ಮುಂದಾಗಿದ್ದು, ಒತ್ತುವರಿ ಸಮಸ್ಯೆ ಎದುರಾಗಿದೆ. ಇದರಿಂದಾಗಿ ವಿಮಾನ ನಿಲ್ದಾಣ ಕಾರ್ಯ ಮತ್ತಷ್ಟು ಮುಂದೆ ಹೋಗುವ ಸಾಧ್ಯತೆ ಇದೆ.