ರಾಯಚೂರು: ಕೇಂದ್ರ ಸರ್ಕಾರದ ಸೂಚನೆಯಂತೆ ಕೊರೊನಾ ಸೋಂಕಿಗೆ ನೀಡಲಾಗುವ ಕೋವ್ಯಾಕ್ಸಿನ್ನನ್ನು ಪ್ರಥಮ ಹಂತದಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರಿಗೆ ನೀಡಲು ನಿಗದಿತ ಸಮಯದಲ್ಲಿ ನೋಂದಣಿ ಕಾರ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಸ್ಥರಗಳಿಗೆ ವ್ಯಾಕ್ಸಿನ್ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಕೋವ್ಯಾಕ್ಸಿನ್ ಕುರಿತು ಜಿಲ್ಲಾ ಮಟ್ಟದ ಟಾಸ್ಕ್ ಪೋಸ್೯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲಾ ರಾಜ್ಯಗಳು ಕೋವ್ಯಾಕ್ಸಿನ್ ಬಳಸುವಂತೆ ಸೂಚನೆ ನೀಡಿದೆ.
ಈ ಹಿನ್ನೆಲೆ ರೋಗಿಗಳ ಜೊತೆ ಪ್ರಥಮ ಸಂಪರ್ಕಕ್ಕೆ ಬರುವ ಆರೋಗ್ಯ ಸೇವಾ ಕಾರ್ಯಕರ್ತರಿಗೆ ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ಮೊದಲು ನೋಂದಣಿ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದರು.

ವಿಶ್ವ ಹಾಗೂ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರ ನಡುವೆ ಕೆಲ ರಾಷ್ಟ್ರಗಳಲ್ಲಿ ಸೇರಿದಂತೆ ನೆರೆಯ ಕೇರಳ ರಾಜ್ಯದಲ್ಲಿ ಎರಡನೇಯ ಹಂತದ ಕೊರೊನಾ ಕಾಣಿಸಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಸಬೇಕು. ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ ಎಲ್ಲಾ ನೌಕರರಿಗೆ ವ್ಯಾಕ್ಸಿನ್ ನೀಡಲು ನಿಗದಿತ ಸಮಯದಲ್ಲಿ ನೋಂದಣಿ ಕಾರ್ಯವಾಗಬೇಕು. ವ್ಯಾಕ್ಸಿನ್ ಉತ್ಪಾದನೆ ಪ್ರಮಾಣ ಹೆಚ್ಚಾದಂತೆ ಎಲ್ಲಾ ಸ್ಥರಗಳಿಗೆ ವಿತರಿಸಲಾಗುವುದು ಎಂದರು.