ಲಿಂಗಸೂರು: ಸರ್ಕಾರದ ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನಗೊಲಿಸುವ ಜೊತೆಗೆ ಸಾರ್ವಜನಿಕರಿಗೆ ಸ್ಪಂದನೆ ಮಾಡಲು ಆಗದ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಪ್ತಿಯಿಂದ ಹೊರಹೋಗಬಹುದು ಎಂದು ಶಾಸಕ ಡಿ.ಎಸ್. ಹೂಲಗೇರಿ ಎಚ್ಚರಿಕೆ ನೀಡಿದರು.
ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬಿಸಿಎಂ, ಸಮಾಜಕಲ್ಯಾಣ, ಆರೋಗ್ಯ, ಕೃಷಿ ಸೇರಿದಂತೆ ಕೆಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಸೇರಿದಂತೆ ಶಾಸಕರ ಮೊಬೈಲ್ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ರೈತರಿಗೆ ಯೂರಿಯಾ ಸೇರಿದಂತೆ ಅಗತ್ಯ ಬೀಜ ಗೊಬ್ಬರಗಳ ಅಭಾವ ಕಾಣಿಸಿಕೊಂಡಿದೆ. ಕೃಷಿ ಅಧಿಕಾರಿಗಳು ಪ್ರತಿಯೊಂದು ಅಂಗಡಿ, ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಹೆಚ್ಚುವರಿ ಪೂರೈಕೆಗೆ ಒತ್ತಡ ಹೇರಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುವಂತೆ ಸೂಚಿಸಿದರು.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ಕೇರ್ ಕೇಂದ್ರದಲ್ಲಿ ಮತ್ತು ರಾಯಚೂರು ರಿಮ್ಸ್ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ ಎಂಬ ಆರೋಪಗಳಿವೆ. ಕೇಂದ್ರದಲ್ಲಿ ಏನೊಂದು ಔಷದೋಪಚಾರ ನೀಡುವುದಿಲ್ಲ ಎಂದಾದರೆ ಅವರನ್ನು ಅಲ್ಲಿ ಇಟ್ಟುಕೊಳ್ಳುವುದರಿಂದ ಲಾಭವೇನು ಎಂದು ಆರೋಗ್ಯ ಇಲಾಖೆಯ ತತ್ಸಾರದ ಬಗ್ಗೆ ಮಾತನಾಡಿ ಸಭೆಯ ಗಮನ ಸೆಳೆದರು.
ಬಿಸಿಎಂ ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳು ವಸತಿ ನಿಲಯಗಳ ಬಗ್ಗೆ ಈಗಲೆ ಸಿದ್ಧತೆ ಮಾಡಿಕೊಳ್ಳಿ. ಉಳಿದ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ್, ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.