ರಾಯಚೂರು/ ಬೀದರ್/ ಬಳ್ಳಾರಿ : ರಾಜ್ಯದ ಗಡಿ ಜಿಲ್ಲೆಗಳಲ್ಲಿ ರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಗಡಿ ಜಿಲ್ಲೆಗಳಾದ ರಾಯಚೂರು, ಬೀದರ್, ಬಳ್ಳಾರಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು.
ರಾಯಚೂರು ಜಿಲ್ಲಾಡಳಿತದಿಂದ ನಗರದ ಡಿ.ಆರ್.ಮೈದಾನದಲ್ಲಿ ಆಯೋಜಿಸಿದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ರಾಷ್ಟ್ರಧ್ವಜಾರೋಹಣ ನೇರವೇರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಪೊಲೀಸ್ ಇಲಾಖೆ, ಗೃಹ ರಕ್ಷಕ ಸಿಬ್ಬಂದಿ, ಸ್ಕೌಟ್ಸ್ ಗೈಡ್ ಮತ್ತು ವಿವಿಧ ಶಾಲಾ-ಕಾಲೇಜುಗಳು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳ ಆಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು ಜತೆಗೆ ವಿವಿಧ ಇಲಾಖೆ ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಿತು.
ಬೀದರ್ ನಲ್ಲಿ ರಾಜ್ಯೋತ್ಸವ ನಿಮಿತ್ತ ಚವ್ಹಾಣ ಧ್ವಜಾರೋಹಣೆ:
ಬೀದರ್ ನಲ್ಲಿ ರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೆರವರಿಸಿದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ರಹಿಂಖಾನ್, ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್, ಸಿಇಓ ಗ್ಯಾನೇಂದ್ರಕುಮಾರ್ ಗಂಗ್ವಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆಯಲ್ಲಿ ವಿವಿಧ ಪೊಲೀಸ್, ಗೃಹ ರಕ್ಷಕ, ಸೇವಾದಳ, ಎನ್ ಸಿಸಿ ತಂಡದಿಂದ ಕವಾಯಿತು ನಡೆಯಿತು.
ಬಳ್ಳಾರಿಯಲ್ಲಿ ಕನ್ನಡ ರಕ್ಷಣಾ ವೇದಿಕೆಯಿಂದ ಜ್ಯೋತಿಯನ್ನು ಬೈಕ್ ಗಳ ಮೂಲಕ ತರಲಾಯಿತು:
ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶದಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕನ್ನಡ ರಕ್ಷಣಾ ವೇದಿಕೆಯಿಂದ ಜ್ಯೋತಿಯನ್ನು ಬೈಕ್ ಗಳ ಮೂಲಕ ತರಲಾಯಿತು. ಗ್ರಾಮಾಂತರ ಪ್ರದೇಶದ ಮಹದೇವ ತಾತ ಮಠದಿಂದ ಕನ್ನಡ ರಕ್ಷಣಾ ವೇದಿಕೆಯ ಜ್ಯೋತಿಯ ಮೆರವಣಿಗೆ ಬೈಕ್ ರ್ಯಾಲಿಯ ಮೂಲಕ ತರಲಾಯಿತು. ಈ ಸಮಯದಲ್ಲಿ ನೂರಾರು ಬೈಕ್ ಗಳಿಗೆ ಕನ್ನಡದ ಧ್ವಜವನ್ನು ಕಟ್ಟಿ ಮಠದಿಂದ ಕೌಲ್ ಬಜಾರ್ ಮಾರ್ಗವಾಗಿ ಮೋತಿ, ರಾಯಲ್ ಮೂಲಕ ಮುನ್ಸಿಪಾಲ್ ಮೈದಾನ ತಲುಪಿತು. ಜಿಲ್ಲಾ ಪಂಚಾಯತ್ ಸದಸ್ಯ ನಾರಾ ಭರತ ರೆಡ್ಡಿ ಬೈಕ್ ಗಳಿಗೆ ಚಾಲನೆ ನೀಡಿದರು.