ರಾಯಚೂರು: ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಅ.21ರಂದು ತುಂಗಭದ್ರಾ ಬ್ರಿಡ್ಜ್ ಮೂಲಕ ರಾಯಚೂರು ಜಿಲ್ಲೆ ಪ್ರವೇಶ ಮಾಡಲಿದೆ ಎಂದು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಹೇಳಿದ್ದಾರೆ.
ಮಂತ್ರಾಲಯ ಶಾಸಕರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು 20ರಂದು ಮಂತ್ರಾಲಯದಲ್ಲಿ ವಾಸ್ತವ್ಯ ಮಾಡಿ, 21ರಂದು ರಾಯರ ದರ್ಶನ ಪಡೆಯಲಿದ್ದಾರೆ. ನಂತರ ಪಾದಯಾತ್ರೆಯ ಮೂಲಕ ಕರ್ನಾಟಕ-ಆಂಧ್ರ ಸೇರುವ ತುಂಗಭದ್ರಾ ಬ್ರಿಡ್ಜ್ ಮೂಲಕ ರಾಯಚೂರು ಪ್ರವೇಶ ಮಾಡಲಿದ್ದಾರೆ. 21ರಂದು 7.30ಕ್ಕೆ ಜಿಲ್ಲೆಗೆ ಸ್ವಾಗತಿಸಿಕೊಳ್ಳಲು ಸಕಲ ರೀತಿಯಾಗಿ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಾದಯಾತ್ರೆ ವೇಳೆ ಗಿಲ್ಲೆಸುಗೂರಿನಲ್ಲಿ ಉದ್ಯೋಗ ಖಾತ್ರಿ ಸಂಬಂಧಿಸಿ ಕಾರ್ಮಿಕರ ಜತೆ ರಾಹುಲ್ ಗಾಂಧಿ ಚರ್ಚಿಸುವರು. ಅಲ್ಲಿಂದ ಯರಗೇರಾ ಗ್ರಾಮದವರೆಗೆ ಪಾದಯಾತ್ರೆ ನಡೆಯಲಿದ್ದು, ಸಂಜೆ 7 ಗಂಟೆಗೆ ವಾಲ್ಮೀಕಿ ವೃತ್ತದಲ್ಲಿ ಕೆಲ ಕಾಲ ಸಭೆ ನಡೆಸುವರು. ಯರಗೇರಾ ಗ್ರಾಮದ ರಂಗನಾಥ ದೇವಸ್ಥಾನ ಹತ್ತಿರ ರಾಹುಲ್ ವಾಸ್ತವ್ಯ ಮಾಡುವರು ಎಂದು ತಿಳಿಸಿದರು.
22ರಂದು ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಿಸಲಿದ್ದು, ಬೆಳಗ್ಗೆ 11 ಗಂಟೆಗೆ ಸಮೀಪದ ಬೃಂದಾವನ ಹೋಟೆಲ್‍ನಲ್ಲಿ ಊಟದ ಬಿಡುವು ನೀಡಲಾಗಿದೆ. ಇದೇ ವೇಳೆ ಸಾರ್ವಜನಿಕರ ಜೊತೆ ರಾಹುಲ್ ಸಂವಾದ ನಡೆಸುವರು. ಅದೇ ದಿನ ಪ್ರಿಯಾಂಕಾ ಗಾಂಧಿ ಕೂಡ ಭಾಗವಹಿಸುವ ಸಾಧ್ಯತೆಗಳಿವೆ. ಸಂಜೆ 4 ಗಂಟೆಗೆ ಪಾದಯಾತ್ರೆ ಆರಂಭಿಸಿ, ನಗರದ ಬಸವೇಶ್ವರ ವೃತ್ತದ ವಾಲ್ಕಟ್ ಮೈದಾನದಲ್ಲಿ ಕಾರ್ನರ್ ಮೀಟಿಂಗ್ ನಡೆಸಲಾಗುವುದು. ಸಂಜೆ 7ಗಂಟೆಗೆ ಯರಮರಸ್‍ನ ಆನಂದ ಪ್ರೌಢಶಾಲಾ ಆವರಣದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅ.23ರ ಬೆಳಗ್ಗೆ 6.30ಕ್ಕೆ ಯಾತ್ರೆ ಆರಂಭಗೊಳ್ಳಲಿದ್ದು, ತೆಲಂಗಾಣಕ್ಕೆ ಯಾತ್ರೆ ಶುರು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
21ರಿಂದ 23ರ ಬೆಳಗಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ ಲಕ್ಷ ಜನರು ಭಾಗವಹಿಸಲಿದ್ದಾರೆ. ಆರಂಭ ದಿನ ತುಂಗಭದ್ರಾ ಸೇತುವೆ ಬಳಿ 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ಸಾಧ್ಯತೆಯಿದೆ. ಪ್ರತಿ ದಿನ 40-50 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ ಸೇರಿ ಅನೇಕ ಶಾಸಕರು, ಮುಖಂಡರು ಪಾಲ್ಗೊಳ್ಳುವರು.
ಗ್ರಾಮೀಣ ಕ್ಷೇತ್ರದಲ್ಲೇ ಯಾತ್ರೆ ಹೆಚ್ಚು ಕ್ರಮಿಸಲಿದ್ದು, ಈ ಭಾಗದ ಪಾದಯಾತ್ರೆಯ ಉಸ್ತುವಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶ್ರೀಧರಬಾಬು, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಜಿಲ್ಲಾಧ್ಯಕ್ಷ ಬಿ.ವಿ ನಾಯಕ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಿಗೆ ತೆರಳಿ ಜನರಿಗೆ ಆಹ್ವಾನಿಸಲಾಗಿದೆ. ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಾತ್ರೆ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಜಿಲ್ಲಾ ಮಂತ್ರಿಗಳು ಕಾಣೆಯಾಗಿದ್ದಾರೆ.. ಹೆಚ್ ಎಸ್ ಸುಂದರೇಶ್